ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್
ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್

ಕಾಶ್ಮೀರದಲ್ಲಿ ಭಯೋತ್ಪಾದನಾ ಹಿಂಸಾಚಾರ ಶೇ.60ರಷ್ಟು ಕುಸಿತ: ಡಿಜಿಪಿ ದಿಲ್ಬಾಗ್ ಸಿಂಗ್

ಕಾಶ್ಮೀರದಲ್ಲಿ ಭಯೋತ್ಪಾದನಾ ಹಿಂಸಾಚಾರ ಶೇ.60ರಷ್ಟು ಕುಸಿತವಾಗಿದೆ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್‌ ಮಾಹಿತಿ ನೀಡಿದ್ದಾರೆ.
Published on

ನವದೆಹಲಿ: ಕಾಶ್ಮೀರದಲ್ಲಿ ಭಯೋತ್ಪಾದನಾ ಹಿಂಸಾಚಾರ ಶೇ.60ರಷ್ಟು ಕುಸಿತವಾಗಿದೆ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್‌ ಮಾಹಿತಿ ನೀಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿದ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್‌ ಅವರು ಕಾಶ್ಮೀರದಲ್ಲಿನ ಹಾಲಿ ಸ್ಥಿತಿಗತಿ ಕುರಿತು ಮಾಹಿತಿ ನೀಡಿದರು. ಈ ವೇಳೆ 'ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಹಿಂಸಾಚಾರ ಶೇ 60ರಷ್ಟು ಕಡಿಮೆಯಾಗಿದೆ ಎಂದು ದಿಲ್ಬಾಗ್ ಸಿಂಗ್‌ ಮಾಹಿತಿ ನೀಡಿದ್ದಾರೆ. 

ಕಾಶ್ಮೀರದ ಸದ್ಯದ ಪರಿಸ್ಥಿತಿ ಮತ್ತು ಶಾಂತಿಪಾಲನೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಗೃಹ ಸಚಿವರಿಗೆ ವಿವರಿಸಿದ ದಿಲ್ಬಾಗ್ ಸಿಂಗ್, 'ಈ ವರ್ಷದ ಜ.1ರಿಂದ ಫೆ.13ರವರೆಗಿನ ಅವಧಿಯಲ್ಲಿ ಬೆಳಕಿಗೆ ಬಂದ ಪ್ರಕರಣಗಳನ್ನು ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಭಯೋತ್ಪಾದನಾ ಚಟುವಟಿಕೆ ಶೇ.60ರಷ್ಟು ಕಡಿಮೆಯಾಗಿದೆ. ಈ ವರ್ಷ ಈವರೆಗೆ ಉಗ್ರರೊಂದಿಗೆ ಗುಂಡಿನ ಚಕಮಕಿ ಅಥವಾ ಮೃತ ಭಯೋತ್ಪಾದಕರ ಅಂತ್ಯಸಂಸ್ಕಾರ ಸಂದರ್ಭ ಭದ್ರತಾ ಪಡೆಗಳ ಮೇಲೆ ಕಲ್ಲುತೂರಾಟದ ಯಾವುದೇ ಘಟನೆ ವರದಿಯಾಗಿಲ್ಲ. ಜನವರಿಯಿಂದೀಚೆಗೆ ಒಟ್ಟು 20 ಉಗ್ರರನ್ನು ಕೊಲ್ಲಲಾಗಿದೆ. ನಾಲ್ವರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಇನ್ನು ಕೊಲ್ಲಲ್ಪಟ್ಟ ಉಗ್ರರ ಪೈಕಿ 10 ಮಂದಿ ಜೈಷ್ ಎ ಮೊಹಮದ್‌ ಸಂಘಟನೆಗೆ ಸೇರಿದವರು. 11 ಮಂದಿ ಹಿಜ್ಬುಲ್ ಮುಜಾಹಿದ್ದೀನ್‌ಗೆ ಸೇರಿದವರು. ಕಾಶ್ಮೀರ ಗಡಿಗೆ ನುಸುಳಿದ್ದ ಮೂವರನ್ನು ಬಾನ್ ಟೋಲ್‌ ಪ್ಲಾಜಾದಲ್ಲಿ ಭದ್ರತಾಪಡೆಗಳು ನಿಗ್ರಹಿಸಿದ್ದವು. ಇದರ ಜೊತೆಗೆ ಶ್ರೀನಗರ ಮತ್ತು ಇತರೆಡೆ ಕಚ್ಚಾಬಾಂಬ್ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿ ಉಗ್ರಗಾಮಿಗಳ ಸಹಚರರನ್ನು ಬಂಧಿಸಲಾಗಿದೆ. ಭಯೋತ್ಪಾದಕರಿಗೆ ಅಗತ್ಯ ನೆರವು ಒದಗಿಸುತ್ತಿದ್ದ 43 ಮಂದಿಯನ್ನು ಬಂಧಿಸಲಾಗಿದೆ ಎಂದು ದಿಲ್ಬಾಗ್ ಸಿಂಗ್ ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ದೊಡ್ಡಮಟ್ಟದ ಕಾನೂನು ಸುವ್ಯವಸ್ಥೆ ಸಮಸ್ಯೆಯೂ ಕಾಣಿಸಿಕೊಂಡಿಲ್ಲ. ಪಹರೆ ವ್ಯವಸ್ಥೆಯನ್ನು ಸುಭದ್ರಗೊಳಿಸಲಾಗಿದೆ. ಸಿಬ್ಬಂದಿ ಸ್ವತಃ ಪಹರೆ ತಿರುಗುವುದರ ಜೊತೆಗೆ ತಂತ್ರಜ್ಞಾನವನ್ನೂ ಬಳಸಿಕೊಳ್ಳಲಾಗುತ್ತಿದೆ. ಉಗ್ರಗಾಮಿಗಳಾಗಲೆಂದು ಮನೆಯಿಂದ ಹೊರಬಂದಿದ್ದ ದಕ್ಷಿಣ ಕಾಶ್ಮೀರದ ಏಳು ಯುವಕರು ತಮ್ಮ ಕುಟುಂಬಗಳಿಗೆ ಹಿಂದಿರುಗಿದ ಬೆಳವಣಿಗೆಯ ಬಗ್ಗೆಯೂ ಅಧಿಕಾರಿಗಳು ಇದೇ ಸಂದರ್ಭ ಸಚಿವರ ಗಮನಕ್ಕೆ ತಂದರು.

ಇನ್ನು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಹೇರಿದ ನಂತರ ಜಮ್ಮು ಕಾಶ್ಮೀರದ ಪೊಲೀಸರು ಮತ್ತು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪ್ಯಾರಾ ಮಿಲಿಟರಿ ಪಡೆಗಳ ನಡುವಣ ಸಂವಹನ ಸುಧಾರಿಸಿತ್ತು. ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ್ದು ಉಗ್ರ ನಿಗ್ರಹ ಕಾರ್ಯಾಚರಣೆಗೆ ಪೂರಕ ಬೆಳವಣಿಗೆಯಾಯಿತು ಎಂದು ಸಚಿವರು ಈ ಸಂದರ್ಭ ಅಭಿಪ್ರಾಯಪಟ್ಟರು ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com