ದೆಹಲಿ: ಹಿಂಸಾಚಾರ ಪ್ರಚೋದಿಸುವ ದೃಶ್ಯ ಪ್ರಸಾರ ಬೇಡ: ಸುದ್ದಿ ವಾಹಿನಿಗಳಿಗೆ ಕೇಂದ್ರ ಸರ್ಕಾರ ಸಲಹೆ

ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಚೋಧನಾತ್ಮಕ ದೃಶ್ಯಾವಳಿಗಳನ್ನು ಪ್ರಸಾರ ಮಾಡದಂತೆ ಬುಧವಾರ ಕೇಂದ್ರ ಸರ್ಕಾರ ಸುದ್ದಿಮಾಧ್ಯಮಗಳಿಗೆ ಸಲಹೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಚೋಧನಾತ್ಮಕ ದೃಶ್ಯಾವಳಿಗಳನ್ನು ಪ್ರಸಾರ ಮಾಡದಂತೆ ಬುಧವಾರ ಕೇಂದ್ರ ಸರ್ಕಾರ ಸುದ್ದಿಮಾಧ್ಯಮಗಳಿಗೆ ಸಲಹೆ ನೀಡಿದೆ.

ಭಾನುವಾರದಿಂದ ದೆಹಲಿಯಲ್ಲಿ ಪೌರತ್ವ ಕಾಯ್ದೆ (ಸಿಎಎ) ಸಂಬಂಧಿತ ಪ್ರತಿಭಟನೆಗಳು ಕೋಮು ಸಂಘರ್ಷಕ್ಕೆ ತಿರುಗಿದ್ದು, ಈ ವರೆಗೂ ಘರ್ಷಣೆಯಲ್ಲಿ 20ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ "ದೇಶ-ವಿರೋಧಿ" ವರ್ತನೆಗಳನ್ನು ಉತ್ತೇಜಿಸುವ ಅಥವಾ ಹಿಂಸಾಚಾರವನ್ನು ಪ್ರಚೋದಿಸಬಲ್ಲ ಯಾವುದೇ ದೃಶ್ಯಗಳನ್ನು ಪ್ರಸಾರ ಮಾಡುವ ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಎಲ್ಲ ಖಾಸಗಿ ಟಿವಿ ಚಾನೆಲ್‌ಗಳಿಗೆ ಸಲಹೆ ನೀಡಿದೆ.

'ಹಿಂಸಾಚಾರವನ್ನು ಪ್ರಚೋದಿಸಬಲ್ಲ, ಭಾವನೆಗಳನ್ನು ಕೆರಳಿಸಬಲ್ಲ ಅಥವಾ ಕಾನೂನು ಮತ್ತು ಸುವ್ಯವಸ್ಥೆ ಸ್ಥಾಪನೆಗೆ ಅಡ್ಡಿಯಾಗಬಲ್ಲ ಇಲ್ಲವೇ, ದೇಶವಿರೋಧೀ ವರ್ತನೆಗಳನ್ನು ಉತ್ತೇಜಿಸಬಲ್ಲ ಚಿತ್ರ, ವಿಡಿಯೊ ಮುಂತಾದ ಯಾವುದೇ ವಸ್ತುವಿಷಯಗಳ ಪ್ರಸಾರದ ವೇಳೆ ಎಚ್ಚರಿಕೆ ವಹಿಸುವಂತೆ ಎಲ್ಲ ಟಿವಿ ಚಾನೆಲ್‌ಗಳಿಗೆ ಈ ಮೂಲಕ ಸಲಹೆ ನೀಡಲಾಗುತ್ತಿದೆ. ಧಾರ್ಮಿಕ ಅಥವಾ ಸಮುದಾಯಗಳ ಮೇಲಿನ ದಾಳಿಗೆ ಸಂಬಂಧಿಸಿದ ವಿಷಯಗಳು ಅಥವಾ ಧಾರ್ಮಿಕ ಗುಂಪು, ಪಂಗಡಗಳನ್ನು ನಿಂದಿಸುವಂತಹಾ ಅಥವಾ ಕೋಮು ಉದ್ವಿಗ್ನತೆಯನ್ನು ಉತ್ತೇಜಿಸಬಲ್ಲ ಯಾವುದೇ ವಿಷಯಗಳನ್ನೂ ಪ್ರಸಾರ ಮಾಡುವಾಗ ಎಚ್ಚರಿಕೆ ವಹಿಸುವಂತೆಯೂ ಖಾಸಗಿ ವಾಹಿನಿಗಳಿಗೆ ನೀಡಲಾಗಿರುವ ಈ ಸಲಹೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಮಾನಹಾನಿಕಾರಕ, ಉದ್ದೇಶಪೂರ್ವಕ, ಸುಳ್ಳು, ವ್ಯಂಗ್ಯವಾದ ಮತ್ತು ಅರ್ಧ ಸತ್ಯಗಳನ್ನು ಬಿಂಬಿಸುವ ವಿಷಯಗಳನ್ನು ಪ್ರದರ್ಶಿಸದಂತೆಯೂ ವಾಹಿನಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ಕೇಬಲ್ ಟೆಲಿವಿಷನ್ ನೆಟ್‌ವರ್ಕ್ (ನಿಯಂತ್ರಣ) ಕಾಯ್ದೆ 1995ರ ಅಡಿಯಲ್ಲಿ ವಿವರಿಸಲಾದ ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಗಳ ಉಲ್ಲಂಘನೆಯಾಗುವ ಯಾವುದೇ ವಿಷಯಗಳನ್ನು ಪ್ರದರ್ಶಿಸದಂತೆ ಕಟ್ಟುನಿಟ್ಟಿನ ಗಮನ ವಹಿಸಬೇಕೆಂದು ಖಾಸಗಿ ವಾಹಿನಿಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚನೆ ನೀಡಿದೆ. 

ಇನ್ನು ಭಾನುವಾರದಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಈ ವರೆಗೂ ಕನಿಷ್ಠ 20 ಮಂದಿ ಬಲಿಯಾಗಿದ್ದು, 190ಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ ನೂರಾರು ಕೋಟಿ ರೂ ಮೌಲ್ಯದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿದ್ದು, ವಾಹನಗಳು, ಮನೆ, ಅಂಗಡಿಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com