ಪಂಜಾಬ್ ವಿಧಾನಸಭೆಯಲ್ಲಿ ಸಿಎಎ ವಿರುದ್ಧ ನಿರ್ಣಯ ಅಂಗೀಕಾರ; ಸುಪ್ರೀಂ ಮೊರೆ ಹೋಗಲು ನಿರ್ಧಾರ

ಪೌರತ್ವ ತಿದ್ದುಪಡಿ ಕಾಯ್ದೆ, 2019 ತಾರತಮ್ಯ ಮತ್ತು ದೇಶದ ಸಂವಿಧಾನದ ಜಾತ್ಯತೀತ ತತ್ವದ ವಿರುದ್ಧವಾಗಿದ್ದು, ಈ ಕಾಯ್ದೆಯನ್ನು ತಕ್ಷಣ ರದ್ದುಗೊಳಿಸುವಂತೆ ಕೋರಿ ಪಂಜಾಬ್ ವಿಧಾನಸಭೆಯು ಇಂದು  ಧ್ವನಿ ಮತದಿಂದ ನಿರ್ಣಯ ಅಂಗೀಕರಿಸಿದೆ
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್
Updated on

ಚಂಡೀಗಢ: ಪೌರತ್ವ ತಿದ್ದುಪಡಿ ಕಾಯ್ದೆ, 2019 ತಾರತಮ್ಯ ಮತ್ತು ದೇಶದ ಸಂವಿಧಾನದ ಜಾತ್ಯತೀತ ತತ್ವದ ವಿರುದ್ಧವಾಗಿದ್ದು, ಈ ಕಾಯ್ದೆಯನ್ನು ತಕ್ಷಣ ರದ್ದುಗೊಳಿಸುವಂತೆ ಕೋರಿ ಪಂಜಾಬ್ ವಿಧಾನಸಭೆಯು ಇಂದು  ಧ್ವನಿ ಮತದಿಂದ ನಿರ್ಣಯ ಅಂಗೀಕರಿಸಿದೆ. ಇದಕ್ಕೂ ಮೊದಲು ಕೇರಳ ಸರ್ಕಾರ ಕೂಡ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿತ್ತು.

ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈ ಕಾಯ್ದೆಯನ್ನು 1930ರ ದಶಕದಲ್ಲಿ ಜರ್ಮನಿಯ ಹಿಟ್ಲರನ ಜನಾಂಗೀಯ ಮತ್ತು ಧಾರ್ಮಿಕ ಶುದ್ಧೀಕರಣ ವಾದಕ್ಕೆ ಹೋಲಿಸಿದ್ದಾರೆ.

ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳ ಎದುರಿಸುತ್ತಿರುವ ಮುಸ್ಲಿಮೇತರ ವಲಸಿಗರಿಗೆ ಹೊಸ ಕಾನೂನು ಆಶ್ರಯ ನೀಡುತ್ತದೆ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪುನರುಚ್ಚರಿಸಿದೆ.ಇತಿಹಾಸದಿಂದ ಯಾವುದೇ ಪಾಠಗಳನ್ನು ಕಲಿತಿಲ್ಲ ಎಂದು  ಮುಖ್ಯಮಂತ್ರಿ ಸಿಂಗ್, ನಿರ್ಣಯ ಮೇಲಿನ ಚರ್ಚೆಯ ವೇಳೆ ಬೇಸರ ವ್ಯಕ್ತಪಡಿಸಿದರು.

ನಾಗರಿಕರ ರಾಷ್ಟ್ರೀಯ ನೋಂದಣಿ ಎಂಬುದು ಪೌರತ್ವ ತಿದ್ದುಪಡಿ ಕಾಯ್ದೆಯ ಒಂದು ಭಾಗವಾಗಿರುವುದರಿಂದ ಜನರಲ್ಲಿ ಈ ಬಗ್ಗೆ ಸಾಕಷ್ಟು ಆತಂಕವಿದೆ. ಈ ಆತಂಕಗಳನ್ನು ನಿವಾರಿಸುವವರೆಗೆ ಮತ್ತು ಅದಕ್ಕೆ ಸಂಬಂಧಿಸಿದ ತಿದ್ದುಪಡಿ ತರುವವರೆಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ ಕೆಲಸ ಕಾರ್ಯಗಳನ್ನು ತಡೆಹಿಡಿಯಬೇಕು ಎಂದು ನಿರ್ಣಯದಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ.
 
ಸಿಎಎ ಅನ್ನು ಸಂವಿಧಾನದ 14 ನೇ ವಿಧಿಯ ಸ್ಪಷ್ಟ ಉಲ್ಲಂಘನೆ ಎಂದು ಕರೆದಿರುವ ಈ ನಿರ್ಣಯವನ್ನು ಕ್ಯಾಬಿನೆಟ್ ಸಚಿವ ಬ್ರಹ್ಮ ಮೊಹಿಂದ್ರಾ ಅವರು ಸದನದಲ್ಲಿ ಮಂಡಿಸಿದರು. ಸ್ಪೀಕರ್ ರಾಣಾ ಕೆಪಿ ಸಿಂಗ್ ಅವರು ಮತ ಚಲಾಯಿಸುವ ಮೊದಲು ನಿರ್ಣಯದ ಮೇಲೆ ವ್ಯಾಪಕ ಚರ್ಚೆ ನಡೆಯಿತು.

ಸಿಎಎ ಅಡಿಯಲ್ಲಿ ಮುಸ್ಲಿಮರು ಮತ್ತು ಇತರ ಸಮುದಾಯಗಳ ಪೌರತ್ವವನ್ನು ಕಸಿದುಕೊಳ್ಳುವ ಆತಂಕವಿದೆ. ಪೌರತ್ವವನ್ನು ಧರ್ಮದ ಆಧಾರದ ಮೇಲೆ ನೀಡುವಂತಿಲ್ಲ. ಎಲ್ಲಾ ಧಾರ್ಮಿಕ ಗುಂಪುಗಳಿಗೆ ಕಾನೂನಿನ ಮುಂದೆ ಸಮಾನತೆ ಇದೆ. ಈ ಕಾಯ್ದೆ ತಾರತಮ್ಯವೆಸಗುವುದರಿಂದ ಈ ಕಾಯ್ದೆಯನ್ನು ರದ್ದುಗೊಳಿಸುವಂತೆ ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ,  ಪಂಜಾಬ್‌ನಲ್ಲಿ ಈ ಸಿಎಎ ಜಾರಿಗೊಳ್ಳಬೇಕಾದರೆ ಅಗತ್ಯ ತಿದ್ದುಪಡಿಗಳನ್ನು ಕೇಂದ್ರ ಸರ್ಕಾರ ಮಾಡಬೇಕು. ಕೇರಳದಂತೆಯೇ ನಾವು ಕೂಡ ಈ ಕಾನೂನನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದೇವೆ ಎಂದು ಹೇಳಿದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಹಳೆಯ ಮಾದರಿಯಲ್ಲೇ ಪಂಜಾಬ್‌ನಲ್ಲಿ ಜನಗಣತಿಯನ್ನು  ನಡೆಸಲಾಗುವುದು. ಎನ್‌ಪಿಆರ್ ಉದ್ದೇಶಕ್ಕಾಗಿ ಕೇಂದ್ರವು ಸೇರಿಸಿದ ಹೊಸ ಅಂಶಗಳನ್ನು  ಜನಗಣತಿಯಲ್ಲಿ ಸೇರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಎಗೆ ತನ್ನ ಜೀವಿತಾವಧಿಯಲ್ಲಿ ಸಾಕ್ಷಿಯಾಗುತ್ತಿರುವುದು ದುರದೃಷ್ಟಕರ ಎಂದು ಹೇಳಿದ ಮುಖ್ಯಮಂತ್ರಿ, 1930ರಲ್ಲಿ ಹಿಟ್ಲರ್‌ನ  ಜರ್ಮನಿಯಲ್ಲಿ ನಡೆದದ್ದು ಈಗ ಭಾರತದಲ್ಲಿ ನಡೆಯುತ್ತಿದೆ. ಜರ್ಮನ್ನರು ಆಗ ಮಾತನಾಡಲಿಲ್ಲ, ಬಳಿಕ ಅವರು ವಿಷಾದಿಸುವಂತಾಯಿತು. ಆದರೆ ನಾವು ಈಗ ಮಾತನಾಡಬೇಕಾಗಿದೆ, ನಂತರ ವಿಷಾದಿಸುವಂತಾಗಬಾರದು ಎಂದು ಅವರು ಹೇಳಿದರು.

ಸಿಎಎಯ ಅಪಾಯಗಳನ್ನು ಅರ್ಥಮಾಡಿಕೊಳ್ಳಲು ಅಡಾಲ್ಫ್ ಹಿಟ್ಲರನ 'ಮೇನ್ ಕ್ಯಾಂಪ್' ಅನ್ನು ಓದಬೇಕು ಎಂದು ಶಿರೋಮಣಿ ಅಕಾಲಿ ದಳ ಸೇರಿದಂತೆ ಇತರ ವಿರೋಧ ಪಕ್ಷಗಳಿಗೆ ಸಲಹೆ ನೀಡಿದ ಕ್ಯಾಪ್ಟನ್ ಸಿಂಗ್, ಪುಸ್ತಕವನ್ನು ಅನುವಾದಿಸಿ ವಿತರಿಸುವುದಾಗಿ ಹೇಳಿದರು, ಇದರಿಂದ ಎಲ್ಲರೂ ಹಿಟ್ಲರ್ ಮಾಡಿದ ಐತಿಹಾಸಿಕ ತಪ್ಪುಗಳನ್ನು ಓದಲು ಮತ್ತು ಗ್ರಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com