ದೆಹಲಿಯ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆಯಿಲ್ಲ: ಅರವಿಂದ್ ಕೇಜ್ರಿವಾಲ್
ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆಗೆ ಬೆಡ್ ಗಳ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಸದ್ಯ 15 ಸಾವಿರಕ್ಕೂ ಅಧಿಕ ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬೆಡ್ ಗಳ ಸೌಕರ್ಯವಿದ್ದು, ಅವುಗಳಲ್ಲಿ 5,300 ಇದುವರೆಗೆ ಭರ್ತಿಯಾಗಿವೆ, ಐಸಿಯು ಬೆಡ್ ಗಳ ಕೊರತೆಯಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾದರೆ ಐಸಿಯು ಬೆಡ್ ಗಳ ಕೊರತೆಯುಂಟಾಗಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ನಿರ್ಮಿಸಿರುವ 1 ಸಾವಿರ ಬೆಡ್ ಗಳ ಸಾಮರ್ಥ್ಯವಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ತಾತ್ಕಾಲಿಕ ಕೋವಿಡ್-19 ಆಸ್ಪತ್ರೆ ಉದ್ಘಾಟನೆ ಇಂದು ನೆರವೇರಿದ್ದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿದರು.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, 1 ಸಾವಿರ ಬೆಡ್ ಗಳ ಸಾಮರ್ಥ್ಯವಿರುವ ಈ ಆಸ್ಪತ್ರೆ ದೆಹಲಿಗೆ ಇಂದಿನ ಪರಿಸ್ಥಿತಿಯಲ್ಲಿ ಅತ್ಯಂತ ಅಗತ್ಯವಾಗಿತ್ತು. ದೆಹಲಿಯಲ್ಲಿ ಇಂದು ಹೋಂ ಐಸೊಲೇಷನ್ ನಲ್ಲಿ ಚಿಕಿತ್ಸೆ ಪಡೆಯುವವರಿದ್ದಾರೆ. ಕೋವಿಡ್-19ನಿಂದ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಆಸ್ಪತ್ರೆಗಳನ್ನು ಹುಡುಕುವ ಪರಿಸ್ಥಿತಿಯಿರುವಾಗ ಸರ್ದಾರ್ ವಲ್ಲಭಬಾಯಿ ಕೋವಿಡ್ ಆಸ್ಪತ್ರೆ ಆ ಕೊರತೆಯನ್ನು ನೀಗಿಸಬಹುದು ಎಂದರು.
ಒಂದು ತಿಂಗಳ ಹಿಂದೆ ಲಾಕ್ ಡೌನ್ ತೆರವುಗೊಳಿಸಿದಾಗ ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿತ್ತು. ಆದರೆ ಇತ್ತೀಚೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದ್ದು ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಹಿಂದೆ 65 ಸಾವಿರವಿದ್ದ ಕೊರೋನಾ ಕೇಸುಗಳು ಇಂದು 25 ಸಾವಿರಕ್ಕೆ ಇಳಿದಿದೆ ಎಂದರು.
ಏನು ಈ ಆಸ್ಪತ್ರೆ ವಿಶೇಷ?: ಡಿಆರ್ ಡಿಒ ಟಾಟಾ ಸನ್ಸ್ ಸಹಯೋಗದಲ್ಲಿ ಸಾವಿರ ಬೆಡ್ ಗಳ ಸಾಮರ್ಥ್ಯವಿರುವ ಕೋವಿಡ್-19 ತಾತ್ಕಾಲಿಕ ಆಸ್ಪತ್ರೆಯನ್ನು 11 ದಿನಗಳಲ್ಲಿ ಸಿದ್ಧಪಡಿಸಿದೆ. ಇಲ್ಲಿ 250 ಐಸಿಯು ಬೆಡ್ ಗಳಿವೆ. ಭಾರತೀಯ ಸೇನಾ ಪಡೆಯ ವೈದ್ಯಕೀಯ ಸೇವೆಗಳ ವಿಭಾಗ ಇದನ್ನು ಕಾರ್ಯನಿರ್ವಹಿಸುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ