ಕಾನ್ಪುರ ಎನ್'ಕೌಂಟರ್ ಪ್ರಕರಣ: ಕುಖ್ಯಾತ ರೌಡಿ ವಿಕಾಸ್ ದುಬೆ ಆಪ್ತ ಅಮರ್ ದುಬೆ ಎನ್'ಕೌಂಟರ್ ನಲ್ಲಿ ಹತ್ಯೆ!
ಕಾನ್ಪುರ: ಉತ್ತರಪ್ರದೇಶದ ಕಾನ್ಪುರದಲ್ಲಿ ಕಳೆದ ಶುಕ್ರವಾರ 8 ಮಂದಿ ಪೊಲೀಸರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಹಾಗೂ ಕುಖ್ಯಾತ ರೌಡಿ ವಿಕಾಸ್ ದುಬೆ ಆಪ್ತ ಅಮರ್ ದುಬೆಯನ್ನು ಎನ್'ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಬುಧವಾರ ತಿಳಿದುಬಂದಿದೆ.
ಉತ್ತರಪ್ರದೇಶದ ಹಮಿರ್ಪುರ್ ನಲ್ಲಿ ಎಸ್'ಟಿಎಫ್ ಪಡೆ ಎನ್'ಕೌಂಟರ್ ನಡೆಸಿದ್ದು, ಅಮರ್ ದುಬೆಯನ್ನು ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಚೌಬೇಪುರ್ ಎಂಬ ಪ್ರದೇಶದಲ್ಲಿ ನಡೆದ ಎನ್'ಕೌಂಟರ್ ನಲ್ಲಿ ವಿಕಾಸ್ ದುಬೆ ಮತ್ತೊಬ್ಬ ಆಪ್ತ ಶ್ಯಾಮು ಬಾಜ್ಪಾಯ್'ನನ್ನು ಎಟಿಎಸ್ ಅಧಿಕಾರಿಗಳು ಬಂಧನಕ್ಕೊಳಫಡಿಸಿದ್ದಾರೆ.
ಎನ್'ಕೌಂಟರ್ ವೇಳೆ ಆರೋಪಿ ಬಾಜ್ಬಾಯ್ ಕಾಲಿಗೆ ಗಾಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರಪ್ರದೇಶ ರಾಜ್ಯದಲ್ಲಿ 60 ಅಪರಾಧ ಕೇಸುಗಳಿದ್ದ ವಿಕಾಸ್ ದುಬೆ ಎಂಬ ಪಾತಕಿಯನ್ನು ಬಂಧಿಸಲು ಪೊಲೀಸರು ದಿಕ್ರು ಎಂಬ ಗ್ರಾಮಕ್ಕೆ ಕಳೆದ ಶುಕ್ರವಾರ ನಸುಕಿನ ಜಾವ ತೆರಳಿದಾಗ ಮೊದಲ ಎನ್'ಕೌಂಟರ್ ನಡೆದಿತ್ತು. ಪೊಲೀಸರು ಬರುವ ಸುಳಿವು ಅರಿತಿದ್ದ ವಿಕಾಸ್ ದುಬೆ ಸಹಚರರು, ರಸ್ತೆಗೆ ಅಡ್ಡಲಾಗಿ ಕಲ್ಲು-ಕಟ್ಟಿಗೆಗಳನ್ನು ಇಟ್ಟಿದ್ದರು.
ಪೊಲೀಸರು ಇವನ್ನು ತೆರವುಗೊಳಿಸಿ ದುಬೆ ಅವಿತಿದ್ದ ಮನೆಯತ್ತ ಆಗಮಿಸಲು ಅಣಿಯಾಗುತ್ತಿದ್ದಂತೆಯೇ ಆತನ ಮನೆಯ ಮೇಲಿಂದ ಕ್ರಿಮಿನಲ್'ಗಳು ಗುಂಡಿನ ಮಳೆಗೆರೆದಿದ್ದಾರೆ. ಆಗ ಗುಂಡೇಟು ತಿಂದ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ 4 ಪೇದೆಗಳು ಅಸುನೀಗಿದ್ದರು.
ಕ್ರಿಮಿನಲ್ ಗಳು ಪೊಲೀಸರ ಬಳಿಯಿದ್ದ ಎಕೆ-47 ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದಿದ್ದರು. ಪೊಲೀಸರು ಈ ಹಿಂದೆ ಹೊಂದಿದ್ದ ಶಸ್ತ್ರಾಸ್ತ್ರಗಳು ದುಬೆಗೆ ದೊರೆತಿದ್ದು, ಅವುಗಳನ್ನೇ ಪೊಲೀಸರ ಮೇಲೆ ದಾಳಿ ನಾಡಲು ದುಬೆ ಸಹಚರರು ಬಳಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಪ್ರೇಮ್ ಪ್ರಕಾಶ್ ಪಾಂಡೆ ಹಾಗೂ ಅತುಲ್ ದುಬೆ ಎಂಬ ಇಬ್ಬರು ಕ್ರಿಮಿನಲ್ ಗಳನ್ನು ಹೊಡೆದುರುಳಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ