

ಮುಂಬೈ: ಕೊರೋನಾ ಅಟ್ಟಹಾಸಕ್ಕೆ ಸಿಕ್ಕು ನಲುಗಿರುವ ದೇಶದ ವಾಣಿಜ್ಯ ರಾಜಧಾನಿ, ಮುಂಬೈನಲ್ಲಿ ಮಳೆ ಆಘಾತ ನೀಡುತ್ತಿದೆ. ಮುಂದಿನ ಆರು ಗಂಟೆಗಳಲ್ಲಿ ನಗರದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮುಂಬೈ, ಥಾಣೆ ಮತ್ತು ಪಾಲ್ಗರ್ ಪ್ರದೇಶದಲ್ಲಿ ಈ ವಾರಪೂರ್ತಿ ಮಳೆಯಾಗಲಿದ್ದು, ಗುರುವಾರ ಕೂಡಾ ಧಾರಾಕಾರ ಮಳೆ ಸುರಿಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮೂರು ಪ್ರದೇಶಗಳಲ್ಲಿ ಯಲ್ಲೋ ಅಲರ್ಟ್ ಬದಲಾಗಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಮುಂಬೈನ ಬಂದ್ರಾ, ಬಂದ್ರಾ ಕುರ್ಲಾ ಕಾಂಪ್ಲೆಕ್ಸ್(ಪೂರ್ವ), ಸಂತಾಕ್ರಜ್, ಕೊಲಬಾ, ಮಹಾಲಕ್ಷ್ಮೀ, ರಾಮಮಂದಿರ ಮತ್ತು ಎನ್ಎಸ್ ಸಿ ಸ್ಟೇಷನ್ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಇದುವರೆಗೂ 10 ಸೆಂಟಿ ಮೀಟರ್ ನಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂಬೈನ ಸಾಕಷ್ಟು ಕಡೆ ರಸ್ತೆಗಳಲ್ಲಿ ನೀರು ತುಂಬಿಕೊಂಡು, ವಾಹನ ಸಂಚಾರ ಅಸ್ತವ್ಯಸ್ತವಾಗಿವೆ. ಮುಂಬೈ ಮಹಾನಗರ ಪಾಲಿಕೆಯು ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ರಸ್ತೆಗಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.