ನವದೆಹಲಿ: ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ ಪ್ರದೇಶದಿಂದ ವಶಕ್ಕೆ ಪಡೆಯಲಾದ ಕಲಾಕೃತಿಗಳ ಸಂರಕ್ಷಣೆಗೆ ಕೋರಿ ಸಲ್ಲಿಸಲಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ.ಇಬ್ಬರು ಅರ್ಜಿದಾರರಿಗೂ ತಲಾ 1 ಲಕ್ಷ ರೂ. ದಂಡವನ್ನು ವಿಧಿಸಿರುವ ಉನ್ನತ ನ್ಯಾಯಾಲಯ, ಒಂದು ತಿಂಗಳೊಳಗೆ ಪಾವತಿಸುವಂತೆ ಸೂಚನೆ ನೀಡಿದೆ.
ಈ ವಿಷಯದ ಬಗ್ಗೆ ಈಗಾಗಲೇ ಪಂಚ ನ್ಯಾಯಾಧೀಶರ ಪೀಠ ತೀರ್ಪು ನೀಡಿದೆ. ಆದರೂ ಮತ್ತೆ ಪಿಐಎಲ್ ಸಲ್ಲಿಸುವ ಮೂಲಕ ವಂಚಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ನ್ಯಾಯಾಧೀಶರಾದ ಅರುಣ್ ಮಿಶ್ರಾ, ಬಿಆರ್ ಗವಾಯ್ ಮತ್ತು ಕೃಷ್ಣನ್ ಮುರಾರಿ ಅವರನ್ನೊಳಗೊಂಡ ಪೀಠ ತೀರ್ಪು ನೀಡಿದೆ.
ರಾಮಜನ್ಮಭೂಮಿ ಪ್ರದೇಶದಲ್ಲಿ ಹಲವಾರು ಕಲಾಕೃತಿಗಳು ದೊರೆತಿದ್ದು, ಅವುಗಳನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ರಾಮ ಜನ್ಮಭೂಮಿ ಟ್ರಸ್ಟ್ ಕೂಡಾ ಒಪ್ಪಿಕೊಂಡಿದೆ ಎಂದು ದೂರುದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಸಂವಿಧಾನದ 32ನೇ ವಿಧಿ ಅಡಿಯಲ್ಲಿ ದೂರುದಾರರು ಏಕೆ ಅರ್ಜಿ ಸಲ್ಲಿಸಿದ್ದಾರೆ ಎಂಬುದರ ಬಗ್ಗೆ ನ್ಯಾಯಾಲಯ ತಿಳಿಯಲು ಬಯಸಿತು. ಇಂತಹ ಕ್ಷುಲಕ ಅರ್ಜಿಗಳನ್ನು ಸಲ್ಲಿಸುವುದನ್ನು ನಿಲ್ಲಿಸಿ. ಈ ಅರ್ಜಿಯ ಅರ್ಥ ಏನು ಅಂತಾ ಗೊತ್ತಾ ?ಎಂದು ಪ್ರಶ್ನಿಸಿದ ನ್ಯಾಯಪೀಠ, ಪಂಚ ನ್ಯಾಯಾಧೀಶರು ಈಗಾಗಲೇ ನೀಡಿರುವ ತೀರ್ಪನ್ನು ಮತ್ತೆ ಯಾರು ಅನುಸರಿಸುವುದಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.
ಕೇಂದ್ರ ಸರ್ಕಾರದ ಪರ ನ್ಯಾಯಾಲಯದಲ್ಲಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದಂಡ ವಿಧಿಸುವುದನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.ನಂತರ ನ್ಯಾಯಪೀಠ, ಇಬ್ಬರೂ ಅರ್ಜಿದಾರರಿಗೂ ತಲಾ 1 ಲಕ್ಷ ರೂ. ದಂಡ ವಿಧಿಸಿ ಒಂದು ತಿಂಗಳೊಳಗೆ ಪಾವತಿಸುವಂತೆ ಸೂಚನೆ ನೀಡಿತು.
Advertisement