ಕೊರೋನಾ ತಗುಲಿತೆಂಬ ಭಯ: ಗರ್ಭಿಣಿ ಸೇರಿದಂತೆ ಕುಟುಂಬಸ್ಥರ ಮೇಲೆ ನೆರೆಯವರಿಂದ ಹಲ್ಲೆ

ದಕ್ಷಿಣ ಭಾಗದ ಪಟೌಲಿ ಬಡಾವಣೆಯಲ್ಲಿ ಕೋವಿಡ್​-19 ಸೋಂಕು ತಗುಲಿದೆ ಎಂಬ ಕಾರಣಕ್ಕಾಗಿ ಗರ್ಭಿಣಿ ಹಾಗೂ ಮಗು ಸೇರಿ ಕುಟುಂಬದ ಮೂವರ ಮೇಲೆ ನೆರೆಹೊರೆಯವರು ಹಲ್ಲೆ ಮಾಡಿರುವ ಘಟನೆ ನಡೆದಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲ್ಕೋತಾ: ದಕ್ಷಿಣ ಭಾಗದ ಪಟೌಲಿ ಬಡಾವಣೆಯಲ್ಲಿ ಕೋವಿಡ್​-19 ಸೋಂಕು ತಗುಲಿದೆ ಎಂಬ ಕಾರಣಕ್ಕಾಗಿ ಗರ್ಭಿಣಿ ಹಾಗೂ ಮಗು ಸೇರಿ ಕುಟುಂಬದ ಮೂವರ ಮೇಲೆ ನೆರೆಹೊರೆಯವರು ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಐಟಿ ಉದ್ಯೋಗಿಯಾಗಿರುವ  ವ್ಯಕ್ತಿ, ಆತನ ಪತ್ನಿ ಮತ್ತು ಮೂರು ವರ್ಷದ ಮಗು ಹಲ್ಲೆಗೆ ಒಳಗಾದವರು. ಈತನ ಪತ್ನಿ ಮೂರು ತಿಂಗಳು ಗರ್ಭಿಣಿಯಾಗಿದ್ದಾಳೆ. ಕೋವಿಡ್​-19 ಕ್ವಾರಂಟೈನ್​ ನಿಯಮದನ್ವಯ ಮನೆಯಲ್ಲೇ ಕ್ವಾರಂಟೈನ್​ಗೆ ಒಳಗಾಗಿದ್ದರು. ಆದರೂ ಇವರ ಮನೆಯೊಳಗೆ ನುಗ್ಗಿದ ನೆರೆಹೊರೆಯವರು ಕ್ವಾರಂಟೈನ್​ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡುತ್ತಿದ್ದಾರೆ ಎಂದು ಆರೋಪಿಸಿ ಇವರ ಮೇಲೆ ಹಲ್ಲೆ ಮಾಡಿದರು ಎನ್ನಲಾಗಿದೆ.

ಮನೆಯೊಳಗೆ ನುಗ್ಗಿದ ನೆರೆಹೊರೆಯವರು ಈ ಪ್ರದೇಶನವನ್ನು ಬಿಟ್ಟುಹೋಗುವಂತೆ ಹೇಳಿ ನನ್ನ ಪತ್ನಿಯನ್ನು ನೆಲಕ್ಕೆ ಕೆಡವಿ ಹೊಡೆದರು. ಅಲ್ಲದೆ ನನ್ನ ಮೇಲೆ ಶೂಗಳಿಂದ ಹಲ್ಲೆ ಮಾಡಿದರು ಎಂದು ಐಟಿ ಉದ್ಯೋಗಿ ಇಮೇಲ್​ ಮೂಲಕ ಪಟೌಲಿ ಪೊಲೀಸ್​ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ.

ಆದರೆ, ಐಟಿ ಉದ್ಯೋಗಿಯ ಹೇಳಿಕೆಯನ್ನು ಅಲ್ಲಗಳೆದಿರುವ ನೆರೆಹೊರೆಯವರು, ಈ ಕುಟುಂಬದವರು ಕ್ವಾರಂಟೈನ್​ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡುತ್ತಿದ್ದರು. ಹಾಗೆ ಮಾಡದಂತೆ ಸಾಕಷ್ಟು ಬಾರಿ ತಿಳಿಸಿದೆವು. ಆದರೂ ಅವರು ತಮ್ಮ ತಪ್ಪನ್ನು ಸುಧಾರಿಸಿಕೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.

ಐಟಿ ಉದ್ಯೋಗಿ ಕಳೆದ ವಾರ ಕೋವಿಡ್​-19 ಪರೀಕ್ಷೆಗೆ ಒಳಪಟ್ಟಿದ್ದಾರೆ. ಇವರ ಪರೀಕ್ಷಾ ವರದಿ ಇನ್ನೂ ಬಂದಿಲ್ಲ ಎನ್ನಲಾಗಿದೆ. ಇವರ ಪತ್ನಿ ಮತ್ತು ಮಗುವನ್ನು ಕೂಡ ಕೋವಿಡ್​-19 ಪರೀಕ್ಷೆಗೆ ಒಳಪಡಿಸಿದ್ದು, ಅವರಿಬ್ಬರ ವರದಿ ನೆಗೆಟಿವ್​ ಬಂದಿರುವುದಾಗಿ ಹೇಳಲಾಗಿದೆ.

ಇನ್ನೂ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಸಿಎಂ ಮಮತಾ ಬ್ಯಾನರ್ಜಿ  ಜನರು ರೋಗದ ವಿರುದ್ಧ ಹೋರಾಡಬೇಕೆ ಹೊರತು ಸೋಂಕಿತರ ವಿರುದ್ಧವಲ್ಲ ಎಂದು ಹೇಳಿದ್ದಾರೆ. ಸೋಂಕಿತ ವ್ಯಕ್ತಿಗೆ ನೆರವಾಗಿ, ಆತ್ಮ ಸ್ಥೈರ್ಯ ತುಂಬಿ ಅವರು ಬೇಗ ಚೇತರಿಸಿಕೊಳ್ಳಲು ಒಗ್ಗಟ್ಟಾಗಿ ನಿಲ್ಲಬೇಕೆಂದು ಕರೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com