'ಭಾರತ ಖಂಡಿತವಾಗಿಯೂ ತನ್ನ ಬೆಳವಣಿಗೆಯನ್ನು ಮರಳಿ ಪಡೆಯಲಿದೆ, ಹೆಚ್ಚೆಚ್ಚು ಸ್ವಾವಲಂಬಿಗಳಾಗಿ': ಪ್ರಧಾನಿ ಮೋದಿ ಕರೆ

ವೇಗದ ಬೆಳವಣಿಗೆಗೆ ಭಾರತವನ್ನು ಮರಳಿ ತರಲು ಐದು ವಿಷಯಗಳು ಬಹಳ ಮುಖ್ಯ,ಅವು ಉದ್ದೇಶ, ಸೇರ್ಪಡೆ, ಹೂಡಿಕೆ, ಮೂಲಸೌಕರ್ಯ, ನಾವೀನ್ಯತೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ
Updated on

ನವದೆಹಲಿ: ವೇಗದ ಬೆಳವಣಿಗೆಗೆ ಭಾರತವನ್ನು ಮರಳಿ ತರಲು ಐದು ವಿಷಯಗಳು ಬಹಳ ಮುಖ್ಯ,ಅವು ಉದ್ದೇಶ, ಸೇರ್ಪಡೆ, ಹೂಡಿಕೆ, ಮೂಲಸೌಕರ್ಯ, ನಾವೀನ್ಯತೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಕಳೆದ ಮಾರ್ಚ್ 25ರಂದು ಕೊರೋನಾ ವೈರಸ್ ತಡೆಗಟ್ಟುವಿಕೆಗೆ ಹೇರಲಾಗಿದ್ದ ದೇಶಾದ್ಯಂತ ಲಾಕ್ ಡೌನ್, ನಂತರ ಅದರ ವಿಸ್ತರಣೆ ಬಳಿಕ ಸುಮಾರು ಎರಡು ತಿಂಗಳ ನಂತರ ಮೋದಿಯವರು ಆರ್ಥಿಕತೆ, ದೇಶದ ಚಟುವಟಿಕೆ ಬಗ್ಗೆ ಮಾತನಾಡುತ್ತಿರುವ ಭಾಷಣ ಇದಾಗಿದೆ.

ಇಂದು ದೇಶದ ಉನ್ನತ ಕೈಗಾರಿಕಾ ಸಂಸ್ಥೆ, ಭಾರತೀಯ ಉದ್ಯಮದ ಒಕ್ಕೂಟದ 125ನೇ ವರ್ಷಾಚರಣೆ ಪ್ರಯುಕ್ತ ಮಾತನಾಡಿದ ಪ್ರಧಾನಿ ಮೋದಿ, ಕೊರೋನಾ ವೈರಸ್ ನಂತರ ಭಾರತ ಸೇರಿದಂತೆ ಜಗತ್ತು ಹಲವು ಬದಲಾವಣೆಗಳಿಗೆ ಒಗ್ಗಿಕೊಳ್ಳಬೇಕಿದೆ. ಇಂತಹ ಆನ್ ಲೈನ್ ಕಾರ್ಯಕ್ರಮಗಳು ಹೊಸ ಕ್ರಮವಾಗಿದೆ. ಭಾರತದ ಸಂಶೋಧನೆ, ಇಲ್ಲಿನ ನಾಯಕರು ಮತ್ತು ನಿಮ್ಮೆಲ್ಲರ ಮೇಲೆ ನನಗೆ ನಂಬಿಕೆಯಿದೆ. ಹಿಂದಿನ ಅಭಿವೃದ್ಧಿ, ಬೆಳವಣಿಗೆಗೆ ಮತ್ತೆ ಭಾರತ ಬರಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಕೊರೋನಾ ವೈರಸ್ ನಮ್ಮ ಬೆಳವಣಿಗೆಯ ವೇಗವನ್ನು ಕುಂಠಿತ ಮಾಡಿರಬಹುದು. ಆದರೆ ಇಂದು ಭಾರತ ಅನ್ ಲಾಕ್ ಡೌನ್ 1ಗೆ ತೆರೆದುಕೊಂಡಿದೆ ಎಂಬುದು ವಾಸ್ತವ. ಹಿಂದಿನ ಬೆಳವಣಿಗೆಯನ್ನು ಮತ್ತೆ ಪಡೆಯುವ ಕ್ರಿಯೆ ಈಗಾಗಲೇ ಆರಂಭವಾಗಿದೆ. ಸರಿಯಾದ ಸಮಯಕ್ಕೆ ಸರಿಯಾದ ಹೆಜ್ಜೆಯಿಡುತ್ತಿದ್ದೇವೆ. ಶಾರೀರಿಕ ಸಂಪನ್ಮೂಲಗಳಿಗೆ ನಾವು ತಯಾರಿ ನಡೆಸಿದ್ದು ಮಾತ್ರವಲ್ಲದೆ ಮಾನವ ಸಂಪನ್ಮೂಲಗಳನ್ನು ಕಾಪಾಡಲು ಪ್ರಯತ್ನಪಟ್ಟಿದ್ದೇವೆ ಎಂದರು.

ಈ ಸಮಯದಲ್ಲಿ ಕೊರೋನಾ ಮಧ್ಯೆ ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸಿ ಭಾರತವನ್ನು ಸದೃಢಗೊಳಿಸುವುದು ನಮ್ಮ ಆದ್ಯತೆಯಾಗಿದೆ. ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು, ನಿಗದಿತ ಕಾಲಮಿತಿಯೊಳಗೆ ಅದು ಜಾರಿಗೆ ಬರುವಂತೆ ಮಾಡುವುದೇ ನಮಗೆ ಸುಧಾರಣೆಯ ಅರ್ಥವಾಗಿದೆ. ಹೂಡಿಕೆ ಮತ್ತು ಉದ್ಯಮಕ್ಕೆ ಪರಿಸರಪೂರಕ ವಾತಾವರಣ ನಿರ್ಮಾಣ ಮಾಡಲು ನಾವು ಸತತ ಪ್ರಯತ್ನಿಸುತ್ತಿದ್ದೇವೆ ಎಂದರು.

ನಮಗೆ ಭಾರತದಲ್ಲಿ ತಯಾರಾದ ವಸ್ತುಗಳು ಹೆಚ್ಚೆಚ್ಚು ಸಿಗಬೇಕು. ಭಾರತದಲ್ಲಿ ವಿಶ್ವದರ್ಜೆಯ ವಸ್ತುಗಳ ತಯಾರಿಕೆಗೆ ಒತ್ತು ನೀಡುವ ಮೂಲಕ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿಕೊಂಡು ಹೆಚ್ಚೆಚ್ಚು ಸ್ವಾವಲಂಬಿಗಳಾಗಬೇಕು ಎಂದು ಮೋದಿ ಹೇಳಿದರು.

ಭಾರತ ತನ್ನ ಹಿಂದಿನ ಅಭಿವೃದ್ಧಿಯ ವೇಗಕ್ಕೆ ಖಂಡಿತಾ ಮರಳಲಿದೆ. ಇಷ್ಟು ವಿಶ್ವಾಸದಿಂದ ಹೇಗೆ ಹೇಳುತ್ತಿದ್ದೇನೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಭಾರತೀಯರ ಪ್ರತಿಭೆ, ಸಂಶೋಧನಾ ಸಾಮರ್ಥ್ಯ, ಕಠಿಣ ಶ್ರಮ, ಶ್ರದ್ಧೆ, ನಿಷ್ಠೆ, ಇಲ್ಲಿನ ಉದ್ಯಮಿಗಳು, ಕೆಲಸದ ಶಕ್ತಿ ಮೇಲೆ ನನಗೆ ನಂಬಿಕೆಯಿದೆ ಎಂದು ಆತ್ಮವಿಶ್ವಾಸದಿಂದ ನುಡಿದರು.

ಒಂದು ಕಡೆ ಕೊರೋನಾ ವೈರಸ್ ಮಧ್ಯೆ ನಾವು ಸುರಕ್ಷಿತವಾಗಿರಬೇಕು, ವೈರಸ್ ಹರಡುವುದನ್ನು ನಾವು ನಿಯಂತ್ರಿಸಬೇಕು, ಆದರೆ ಅದೇ ಸಮಯದಲ್ಲಿ ಮತ್ತೊಂದೆಡೆ, ನಾವು ಆರ್ಥಿಕತೆಯನ್ನು ಮುಂದುವರಿಸಬೇಕಾಗಿದೆ, ಇದು ಸವಾಲಿನ ವಿಷಯ ಎಂದು ಮೋದಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com