
ಚೆನ್ನೈ: ಕೋವಿಡ್-19 ರಿಂದ ತಂದೆಯನ್ನು ಉಳಿಸುವ ಔಷಧ ತರುವುದಕ್ಕಾಗಿ ತಮಿಳುನಾಡಿನ ಜೋಯಲ್ ಪಿಂಟೊ ಎಂಬ ವ್ಯಕ್ತಿ 1,000 ಕಿ.ಮೀ ಕಾರು ಡ್ರೈವ್ ಮಾಡಿದ್ದಾರೆ.
"ಟೋಸಿಲಿಜುಮಾಬ್ ಎಂಬ ಔಷಧವನ್ನು ನೀಡಿದರೆ ಮಾತ್ರ ನಿಮ್ಮ ತಂದೆ ಕೋವಿಡ್-19 ನಿಂದ ಚೇತರಿಸಿಕೊಳ್ಳುವುದಕ್ಕೆ ಸಾಧ್ಯ ಎಂದು ಜೋಯಲ್ ಪಿಂಟೋಗೆ ಹೇಳಿದ್ದೇ ತಡ, ಆತ ಚೆನ್ನೈ ನಲ್ಲಿರುವ ಎಲ್ಲಾ ಫಾರ್ಮಸಿಗಳಿಗೂ ಸುತ್ತಿದ್ದಾರೆ. ಆದರೆ ಈ ಔಷಧದ ದಾಸ್ತಾನು ಮುಗಿದು 15 ದಿನಗಳಿಂದಲೂ ಅಲಭ್ಯತೆ ಕಾಡುತ್ತಿದೆ ಎಂಬುದು ಬಹಳ ಹೊತ್ತಿನ ಬಳಿಕ ತಿಳಿದುಬಂದಿದೆ.
ಇನ್ಫ್ಲಾಮೇಷನ್ ನ್ನು ಕಡಿಮೆ ಮಾಡುವುದಕ್ಕಾಗಿ ಟೋಸಿಲಿಜುಮಾಬ್ ಎಂಬ ಔಷಧ ನೀಡಲಾಗುತ್ತದೆ, ಈ ಔಷಧ ತಯಾರಿಕೆಗೆ ಪೇಟೆಂಟ್ ಪಡೆದಿರವುದು ಕೇವಲ ಒಂದೇ ಒಂದು ಸಂಸ್ಥೆಯಾಗಿದ್ದು, 75,000-95,000 ರೂಪಾಯಿಗಳಷ್ಟಾಗಲಿದೆ.
"ಪ್ರಾರಂಭದಲ್ಲಿ ವೈದ್ಯರು ಈ ಔಷಧವನ್ನು ಎರಡು ದಿನಗಳಲ್ಲಿ ತಾವೇ ತರಿಸುವುದಾಗಿ ಹೇಳಿದರು. ಆದರೆ ಅದು ಬಂದು ತಲುಪುವ ವಿಷಯದಲ್ಲಿ ಅನಿಶ್ಚಿತತೆ ಎದುರಾಗುತ್ತಿದ್ದಂತೆಯೇ ಈ ಔಷಧ ತರಲು ನನಗೇ ಹೇಳಿದರು. ವೈದ್ಯರು ಹೇಳುತ್ತಿದ್ದಂತೆಯೇ ನೂರಾರು ಫಾರ್ಮಸಿಗಳಿಗೆ ಕರೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಔಷಧಿಯ ಅಗತ್ಯತೆ ಬಗ್ಗೆ ಹಾಕಿದೆ. ಆದರೆ ನನ್ನಂತೆಯೇ ಹಲವಾರು ಜನರು ಟೋಸಿಲಿಜುಮಾಬ್ ಔಷಧಕ್ಕಾಗಿ ಬೇಡಿಕೆ ಇಟ್ಟಿದ್ದರು. ಎಲ್ಲೂ ಸಿಗಲಿಲ್ಲ. ಸೋಮವಾರದ ವೇಳೆಗೆ ನನ್ನ ತಂದೆ ಆಸ್ಪತ್ರೆಗೆ ದಾಖಲಾಗಿ 13 ನೇ ದಿನವಾಗಿತ್ತು. ವೈದ್ಯರು ಸಮಯ ಕಡಿಮೆ ಇದೆ, ಟೋಸಿಲಿಜುಮಾಬ್ ಔಷಧ ಸಿಗದೇ ಇದ್ದರೆ ಚಿಕಿತ್ಸೆ ಮುಂದುವರೆಸಲು ಸಾಧ್ಯವಿಲ್ಲ ಎಂದುಬಿಟ್ಟರು. ಕೊನೆಗೆ ಒಟ್ಟೇರಿ ಪ್ರದೇಶದಲ್ಲಿ ಒಬ್ಬರು ಈ ಔಷಧ ಹೈದರಾಬಾದ್ ನಲ್ಲಿ ಸಿಗುತ್ತದೆ ಎಂದರು, ಆಸ್ಪತ್ರೆಗೆ ಪತ್ರವಿದ್ದಿದ್ದರಿಂದ 45 ನಿಮಿಷಗಳಲ್ಲಿ ಪಾಸ್ ಸಿಕ್ಕಿತು ತಕ್ಷಣವೇ ಚೆನ್ನೈ ನಿಂದ ಹೈದರಾಬಾದ್ ಗೆ ಹೋದೆ, ಫಾರ್ಮಸಿಯಲ್ಲಿ 92,000 ರೂಪಾಯಿ ತೆಗೆದುಕೊಂಡರು, ಅದನ್ನು ನಂಬಬೇಕೋ ಬಿಡಬೇಕೋ ಎಂಬುದನ್ನು ನೋಡುವುದಕ್ಕೂ ಸಮಯವಿರಲಿಲ್ಲ. ಔಷಧ ತಂದುಕೊಡಲಾಗಿದ್ದು, ತಂದೆ ಗುಣಮುಖರಾಗುತ್ತಾರೆಂಬ ವಿಶ್ವಾಸದಲ್ಲಿದ್ದೇವೆ ಎನ್ನುತ್ತಾರೆ ಜೋಯಲ್ ಪಿಂಟೋ.
"ಟೋಸಿಲಿಜುಮಾಬ್ ಔಷಧಕ್ಕಾಗಿ ಹಲವಾರು ಜನರು ಹುಡುಕುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಹಾಗೂ ಆಸ್ಪತ್ರೆಗಳು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಔಷಧಗಳ ದಾಸ್ತಾನನ್ನು ಸಾಕಷ್ಟು ಇಟ್ಟುಕೊಳ್ಳಬೇಕು. ಇನ್ನೂ ವಿಳಂಬವಾಯಿತೆಂದರೆ ಎಷ್ಟು ಜನ ಜೀವಕಳೆದುಕೊಳ್ಳುತ್ತಾರೋ ಗೊತ್ತಿಲ್ಲ" ಎನ್ನುತ್ತಾರೆ ಜೋಯಲ್ ಪಿಂಟೊ.
Advertisement