
ನವದೆಹಲಿ: ಮಾರಕ ಕೊರೋನಾ ವೈರಸ್ ಆರ್ಭಟ ಜೋರಾಗಿರುವಂತೆಯೇ ಭಾರತದಲ್ಲಿ ಸೋಂಕಿತರ ಚೇತರಿಕೆ ಪ್ರಮಾಣ ಶೇ.52.8ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಭಾರತದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವಂತೆಯೇ ಸಮಾಧಾನಕರ ಸಂಗತಿಯೊಂದನ್ನು ಕೇಂದ್ರ ಆರೋಗ್ಯ ಇಲಾಖೆ ಹೊರ ಹಾಕಿದೆ. ಭಾರತದಲ್ಲಿ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿರುವಂತೆಯೇ ದೇಶದಲ್ಲಿ ಪ್ರಸ್ತುತ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಂತೆ ಭಾರತದಲ್ಲಿ ಕೊರೋನಾ ಸೋಂಕಿತರ ಚೇತರಿಕೆ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಪ್ರಸ್ತುತ ಭಾರತದಲ್ಲಿರುವ ಒಟ್ಟಾರೆ ಸೋಂಕಿತರ ಪೈಕಿ ಶೇ.52.8ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಹೇಳಲಾಗಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 6,922 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಆ ಮೂಲಕ ದೇಶದಲ್ಲಿ ಒಟ್ಟಾರೆ 1,86,934 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 10,974 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಪ್ರಸ್ತುತ ಭಾರತದಲ್ಲಿ 3.54ಲಕ್ಷ ಸೋಂಕಿತರಿದ್ದು, ಈ ಪೈಕಿ ಅರ್ಧಕ್ಕಿಂತ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸ್ತುತ ದೇಶದಲ್ಲಿ ೧ ಲಕ್ಷದ ೫೫,೨೨೭ ಸಕ್ರಿಯ ಪ್ರಕರಣಗಳು ವೈದ್ಯರ ನಿಗಾದಲ್ಲಿವೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಾವಿನ ಪ್ರಮಾಣ ಶೇ.3.36ಕ್ಕೆ ಏರಿಕೆ
ಕೊರೋನಾ ಸೋಂಕಿತರ ಚೇತರಿಕೆ ಪ್ರಮಾಣದ ಏರಿಕೆಯ ಬೆನ್ನಲ್ಲೇ ಇತ್ತ ಕೊರೊನಾ ಸೋಂಕಿತರ ಸಾವಿನ ಪ್ರಮಾಣದಲ್ಲಿಯೂ ಕೂಡ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ. ಭಾರತದಲ್ಲಿ ಕೊರೋನಾ ಸೋಂಕು ಕಂಡು ಬಂದ ನಂತರ ದೇಶದಲ್ಲಿ ಒಂದು ದಿನದಲ್ಲಿ ಅತಿಹೆಚ್ಚಿನ ಸಾವಿನ ಸಂಖ್ಯೆಗಳು ವರದಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 2 ಸಾವಿರದ ಮೂರು ಮಂದಿ ಮೃತಪಟ್ಟಿದ್ದು ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 11 ಸಾವಿರದ 903ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ದೇಶದಲ್ಲಿ ಕೊರೊನಾ ಸಾವಿನ ಪ್ರಮಾಣ ಶೇ.3.36ಕ್ಕೆ ಏರಿದೆ.
ಟೆಸ್ಟ್ ಸಂಖ್ಯೆಗಳ ಗಣನೀಯ ಏರಿಕೆ
ಈ ನಡುವೆ ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ತನ್ನ ವಿವಿಧ ಪ್ರಯೋಗಾಲಯಗಳಲ್ಲಿ 1 ಲಕ್ಷದ 63 ಸಾವಿರದ 187 ಕೊರೋನಾ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳಿಗೆ ಕೋವಿಡ್ 19 ಪರೀಕ್ಷೆ ನಡೆಸಲು ಅನುಮತಿ ಕಲ್ಪಿಸುವ ಮೂಲಕ ದೇಶದಲ್ಲಿ ಪರೀಕ್ಷಾ ಸಾಮರ್ಥ್ಯ ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. 924 ಸರ್ಕಾರಿ ಪ್ರಯೋಗಾಲಯಗಳು, 250 ಖಾಸಗಿ ಪ್ರಯೋಗಾಲಯ ಸೇರಿದಂತೆ ದೇಶಾದ್ಯಂತ ಪ್ರಸ್ತುತ 1,174 ಪ್ರಯೋಗಾಲಯಗಳು ಕೊರೊನಾ ಪರೀಕ್ಷೆ ನಡೆಸುತ್ತಿವೆ.
Advertisement