ಪೂರ್ವ ಲಡಾಕ್ ನಲ್ಲಿ ಘರ್ಷಣೆ: ನಾಲ್ವರು ಉನ್ನತ ಸಚಿವರು, ಸೇನಾ ಮುಖ್ಯಸ್ಥರ ಜೊತೆ ಪ್ರಧಾನಿ ಮೋದಿ ತಡರಾತ್ರಿ ಮಾತುಕತೆ

ಭಾರತ-ಚೀನಾ ಸೇನೆಗಳ ಪೂರ್ವ ಲಡಾಕ್ ನ ಗಡಿಯಲ್ಲಿನ ಸಂಘರ್ಷ, ಹತ್ತಾರು ಸೈನಿಕರ ಬಲಿದಾನ ಕೇಂದ್ರ ಸರ್ಕಾರವನ್ನು ಆತಂಕಕ್ಕೀಡುಮಾಡಿದೆ.
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ
Updated on

ನವದೆಹಲಿ:ಭಾರತ-ಚೀನಾ ಸೇನೆಗಳ ಪೂರ್ವ ಲಡಾಕ್ ನ ಗಡಿಯಲ್ಲಿನ ಸಂಘರ್ಷ, ಹತ್ತಾರು ಸೈನಿಕರ ಬಲಿದಾನ ಕೇಂದ್ರ ಸರ್ಕಾರವನ್ನು ಆತಂಕಕ್ಕೀಡುಮಾಡಿದೆ.

ಸೋಮವಾರ ರಾತ್ರಿ ನಂತರ ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆ ಬಳಿ ನಡೆದ ಹಠಾತ್ ಬೆಳವಣಿಗೆ ನಂತರ ನಿನ್ನೆ ಸಾಯಂಕಾಲದ ಹೊತ್ತಿಗೆ ಭಾರತೀಯ ಸೇನೆಯ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನೆ ಪ್ರಕಟಿಸಿತು. ಈ ಪ್ರಕಟಣೆ ಹೊರಬಿದ್ದ ಕೆಲವೇ ಹೊತ್ತಿನಲ್ಲಿ ತಡರಾತ್ರಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಂಪುಟದ ನಾಲ್ವರು ಉನ್ನತ ಸಚಿವರು, ಭಾರತೀಯ ಸೇನಾ ಮುಖ್ಯಸ್ಥರು ಭೇಟಿ ಮಾಡಿ ತೀವ್ರ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳಿಗೆ ಲಭ್ಯವಾಗಿದೆ.

ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಪ್ರಧಾನಿ ಮೋದಿ ನಿವಾಸದಲ್ಲಿ ನಡೆದ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸೇನಾ ಮುಖ್ಯಸ್ಥ ಜ.ಎಂ.ಎಂ.ನಾರವಾನೆ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

ಭಾರತೀಯ ಸೈನಿಕರು ಎರಡು ಬಾರಿ ಗಡಿ ದಾಟಿ ಬಂದು ನಮ್ಮ ಸೈನಿಕರು ಪ್ರಚೋದಿಸಿದರು, ಚೀನಾ ಸೈನಿಕರ ಮೇಲೆ ದಾಳಿ ಮಾಡಲಾರಂಭಿಸಿದರು.ಆಗ ನಮ್ಮ ಸೈನಿಕರು ಪ್ರತಿಬಂಧಿಸಲು ಹೋಗಿ ಹಿಂಸಾಚಾರ, ಘರ್ಷಣೆ ನಡೆಯಿತು ಎಂದು ಚೀನಾ ಸೇನಾಪಡೆ ಹೇಳುತ್ತಿದ್ದರೆ ಗಡಿ ವಾಸ್ತವ ರೇಖೆ ಬಳಿ ಯಥಾಸ್ಥಿತಿ ಶಾಂತಿ ಕಾಯ್ದುಕೊಳ್ಳುವ ಪ್ರಕ್ರಿಯೆಯನ್ನು ಬದಲಾಯಿಸಿ ಹಿಂಸಾಕೃತ್ಯ ನಡೆಸಲು ಚೀನಾ ಮುಂದಾಯಿತು ಎಂದು ಭಾರತ ಆರೋಪಿಸುತ್ತಿದೆ.

ಎರಡೂ ದೇಶಗಳ ಸೈನಿಕರು ಯಾವುದೇ ಶಸ್ತ್ರಾಸ್ತ್ರಗಳ ಮೂಲಕ ದಾಳಿ ಮಾಡಿಲ್ಲ, ಬದಲಿಗೆ ಕೈಯಿಂದ ಕೈಯಿಗೆ, ಕಲ್ಲು ತೂರಾಟ ನಡೆಸಿ ಘರ್ಷಣೆ ಮಾಡಿವೆಯಷ್ಟೆ, ಅದರಲ್ಲಿಯೇ ಇಷ್ಟೊಂದು ಪ್ರಮಾಣದ ಸಾವು,ನೋವು ಸಂಭವಿಸಿದೆ ಎಂದು ಭಾರತೀಯ ಸೇನಾ ಮೂಲಗಳು ಎಎಫ್ ಪಿ ಸುದ್ದಿಸಂಸ್ಥೆಗೆ ತಿಳಿಸಿವೆ.

ಸೈನಿಕರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು, ಕಲ್ಲುಗಳನ್ನು ಎಸೆಯತೊಡಗಿದರು. ಇದಕ್ಕೆ ಪ್ರತಿಯಾಗಿ ಚೀನಾ ಸೈನಿಕರು ಕೈಗೆ ಸಿಕ್ಕಿದ ಬಲವಾದ ಹರಿತ ಆಯುಧಗಳಿಂದ ಭಾರತೀಯ ಸೈನಿಕರ ಮೇಲೆ ದಾಳಿ ಮಾಡಿದರು. ಸೋಮವಾರ ಮಧ್ಯರಾತ್ರಿ ಈ ಕದನ ಗಂಟೆಗಳವರೆಗೆ ಸಾಗಿತು ಎಂದು ಭಾರತೀಯ ಸೇನಾ ಮೂಲಗಳು ಹೇಳುತ್ತವೆ.

ಚೀನಾದ ರಕ್ಷಣಾ ಸಚಿವರು ಸಾವು, ನೋವುಗಳಾಗಿದೆ ಎಂದು ಹೇಳಿದ್ದಾರೆಯೇ ಹೊರತು ಎಷ್ಟು ಪ್ರಮಾಣದಲ್ಲಿ ಎಂದು ಬಹಿರಂಗಪಡಿಸಿಲ್ಲ.

ರಕ್ಷಣಾ ಸಚಿವರ ಮಾತುಕತೆ:ನಿನ್ನೆಯ ಬೆಳವಣಿಗೆ ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೂರೂ ಸೇನಾಪಡೆಗಳ ಮುಖ್ಯಸ್ಥರು, ರಕ್ಷಣಾ ಪಡೆಯ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರ ಜೊತೆ ತುರ್ತು ಮಾತುಕತೆ ನಡೆಸಿದ್ದಾರೆ. ವಿದೇಶಾಂಗ ಇಲಾಖೆ ಸಚಿವ ಜೈಶಂಕರ್ ಅವರ ಜೊತೆ ಚರ್ಚಿಸಿ ಮುಂದಿನ ಕ್ರಮಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಇನ್ನು ಸೋಮವಾರ ಮಧ್ಯರಾತ್ರಿ ನಡೆದ ಘರ್ಷಣೆಯಲ್ಲಿ ಚೀನಾ ಸೇನೆಯ ಕಮಾಂಡಿಂಗ್ ಅಧಿಕಾರಿ ಹುತಾತ್ಮರಾಗಿದ್ದಾರೆ ಎಂದು ಮೂಲಗಳಿಂದ ಸುದ್ದಿಸಂಸ್ಥೆಗೆ ತಿಳಿದುಬಂದಿದೆ.

ಭಾರತ-ಚೀನಾ ಯುದ್ಧ: ಭಾರತ-ಚೀನಾ ಮಧ್ಯೆ ಯುದ್ಧಕ್ಕೆ 5 ದಶಕಗಳ ಇತಿಹಾಸವೇ ಇದೆ. 1962ರಲ್ಲಿ ನಡೆದ ಸುದೀರ್ಘ ಯುದ್ಧದಲ್ಲಿ ಹೋರಾಡಿ ಚೀನಾ ಭಾರತದ ಪ್ರಾಂತ್ಯವನ್ನು ತನ್ನದಾಗಿಸಿಕೊಂಡಿತ್ತು. ನಂತರ 1967ರಲ್ಲಿ ಅಂತಹದ್ದೇ ಭಯಾನಕ ಯುದ್ಧ ನಡೆದಿತ್ತು, 1975ರಲ್ಲಿ ಕೂಡ ಹಿಂಸಾಚಾರ ನಡೆದು ಸಾವು, ನೋವುಗಳುಂಟಾಗಿತ್ತು. ಆ ಸಂದರ್ಭದಲ್ಲಿ ನಾಲ್ವರು ಭಾರತೀಯ ಸೈನಿಕರು ಹುತಾತ್ಮರಾಗಿ ಅರುಣಾಚಲ ಪ್ರದೇಶದಲ್ಲಿ ವಿಭಜನೆಯಾಗಿತ್ತು.

ಚೀನಾ-ಭಾರತ-ಭೂತಾನ್ ಗಡಿಯ ಡೊಕ್ಲಮ್ ನಲ್ಲಿ ಚೀನಾ ಸೇನಾಪಡೆ 2017ರಲ್ಲಿ 72 ದಿನಗಳ ಕಾಲ ತನ್ನ ಸೈನ್ಯವನ್ನು ನಿಯೋಜಿಸಿತ್ತು. ನಂತರ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಎರಡು ಶೃಂಗಸಭೆಗಳನ್ನು ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com