
ನವದೆಹಲಿ; ಭಾರತ-ಚೀನಾ ಗಡಿಯ ಗಲ್ವಾನ್ ಕಣಿವೆ ವಿಚಾರದಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನರೇಂದ್ರ ಮೋದಿಯ ಬದಲಿಗೆ ಸರೆಂಡರ್(ಶರಣಾಗತಿ) ಮೋದಿ ಎಂದು ಕರೆದರು. ಭಾರತದ ಭೂಪ್ರದೇಶವನ್ನು ಚೀನೀಯರಿಗೆ ಒಪ್ಪಿಸಿಬಿಟ್ಟು ಶರಣಾಗಿದ್ದಾರೆ ಮೋದಿ ಎಂದು ಆರೋಪಿಸಿದರು.
ನರೇಂದ್ರ ಮೋದಿ ನಿಜವಾಗಿಯೂ ಸರೆಂಡರ್ ಮೋದಿ(surrender Modi) ಎಂದು ಟ್ವೀಟ್ ಮೂಲಕ ಟೀಕಿಸಿದರು. ಇಂದು ತಮ್ಮ ವಾಗ್ದಾಳಿಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಚೀನಾದ ಸಿಟ್ಟು, ಆಕ್ರೋಶಕ್ಕೆ ಮೋದಿಯವರು ಭಾರತದ ಭೂ ಪ್ರದೇಶವನ್ನು ಚೀನಾಕ್ಕೆ ಒಪ್ಪಿಸಿಬಿಟ್ಟಿದ್ದಾರೆ ಎಂದರು.
ಭಾರತ-ಚೀನಾ ಗಡಿಯ ಪೂರ್ವ ಲಡಾಕ್ ನಲ್ಲಿ ಕಳೆದ ಸೋಮವಾರ ರಾತ್ರಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾದ ನಂತರ ಕಾಂಗ್ರೆಸ್ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಟೀಕಿಸುತ್ತಲೇ ಬಂದಿದೆ.
ಕಾಂಗ್ರೆಸ್ ಆರೋಪಕ್ಕೆ ನಿನ್ನೆ ಪ್ರತಿಕ್ರಿಯಿಸಿದ್ದ ಪ್ರಧಾನ ಮಂತ್ರಿ ಕಾರ್ಯಾಲಯ, ಸರ್ವಪಕ್ಷ ಸಭೆಯಲ್ಲಿ ಮೋದಿಯವರು ನೀಡಿದ್ದ ಹೇಳಿಕೆಯನ್ನು ಕುಚೇಷ್ಠೆಯ ರೀತಿಯಲ್ಲಿ ಪ್ರತಿಪಕ್ಷ ನಾಯಕರು ವ್ಯಾಖ್ಯಾನಿಸುತ್ತಿದ್ದಾರೆ. ಚೀನಾದ ಸೇನಾಪಡೆಗಳಿಗೆ ಭಾರತದೊಳಗೆ ನುಗ್ಗಲು ಸಾಧ್ಯವಾಗಿಲ್ಲ ಎಂದು ಪ್ರಧಾನಿಯವರು ಹೇಳಿದ್ದು ಎಂದು ಸ್ಪಷ್ಟನೆ ನೀಡಿತ್ತು.
Advertisement