ಗಣೇಶ ವಿಗ್ರಹಗಳೂ ಏಕೆ ಚೀನಾದಿಂದ ಆಮದು?: ನಿರ್ಮಲಾ ಸೀತಾರಾಮನ್ ಪ್ರಶ್ನೆ
ಬೆಳವಣಿಗೆಯನ್ನು ಉತ್ತೇಜಿಸುವುದಕ್ಕೆ ಆಮದು ಮಾಡಿಕೊಳ್ಳುವುದರಲ್ಲಿ ತಪ್ಪೇನು ಇಲ್ಲ. ಆದರೆ ಗಣೇಶನ ವಿಗ್ರಹಗಳನ್ನೂ ಏಕೆ ಚೀನಾದಿಂದ ಆಮದು ಮಾಡಿಕೊಳ್ಳಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.
ಕೈಗಾರಿಕೆಗಳಿಗೆ ಅಗತ್ಯವಿರುವ, ದೇಶದಲ್ಲಿ ಲಭ್ಯತೆಯ ಕೊರತೆ ಇರುವ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳುವುದರಲ್ಲಿ ಸಮಸ್ಯೆ ಇಲ್ಲ ಎಂದು ತಮಿಳುನಾಡು ವಿಭಾಗದ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡಿರುವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ವೇಳೆ ಆತ್ಮ ನಿರ್ಭರ ಭಾರತ ಅಭಿಯಾನದ ಬಗ್ಗೆಯೂ ಮಾತನಾಡಿರುವ ನಿರ್ಮಲಾ ಸೀತಾರಾಮನ್, ಉದ್ಯೋಗಾವಕಾಶಗಳು, ಬೆಳವಣಿಗೆಗೆ ಸಹಕಾರಿಯಾಗದ ಆಮದುಗಳಿಂದ ಸ್ವಾವಲಂಬಿಯಾಗುವುದಕ್ಕೆ ಸಹಕಾರಿಯಾಗುವುದಕ್ಕೆ, ದೇಶದ ಆರ್ಥಿಕತೆಗೆ ಯಾವುದೇ ಪ್ರಯೋಜನವಿಲ್ಲ.
ಪ್ರತಿ ವರ್ಷ ಬರುವ ಗಣೇಶ ಚತುರ್ಥಿಯ ದಿನದಂದು ಮಣ್ಣಿನಿಂದ ಮಾಡಿದ ಗಣೇಶನನ್ನು ಸ್ಥಳೀಯರಿಂದ ಖರೀದಿಸಲಾಗುತ್ತದೆ. ಆದರೆ ಈಗ ಗಣೇಶನ ವಿಗ್ರಹಗಳನ್ನೂ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ರೀತಿಯ ಪರಿಸ್ಥಿತಿ ಏಕೆ? ನಮಗೆ ಮಣ್ಣಿನಿಂದ ಗಣೇಶ ವಿಗ್ರಹವನ್ನೂ ಮಾಡಿಕೊಳ್ಳಲು ಸಾಧ್ಯವಿಲ್ಲವೆ? ಎಂದು ಸೀತಾರಾಮನ್ ಪ್ರಶ್ನಿಸಿದ್ದಾರೆ. ದಿನ ನಿತ್ಯದ ಬಳಕೆಗೆ ಉಪಯೋಗಿಸುವ ಸೋಪ್ ಬಾಕ್ಸ್, ಪ್ಲಾಸ್ಟಿಕ್ ಉಪಕರಣಗಳು, ಪೂಜಾ ಸಾಮಗ್ರಿಗಳನ್ನು ಸ್ಥಳೀಯ ಸಂಸ್ಥೆಗಳೇ ತಯಾರಿಸಿದರೆ, ಸಣ್ಣ ಹಾಗೂ ಮಧ್ಯಮ, ಅತಿ ಸಣ್ಣ ಉದ್ಯಮಗಳಿಗೆ ಸಹಕಾರಿಯಾಗಲಿದ್ದು ಸ್ವಾವಲಂಬನೆ ಹೆಚ್ಚುತ್ತದೆ ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.
ಆಮದನ್ನು ಕಡಿಮೆ ಮಾಡಿ ಸ್ವಾವಲಂಬನೆಯನ್ನು ಸಾಧಿಸುವುದೇ ಆತ್ಮನಿರ್ಭರ ಅಭಿಯಾನದ ಆಶಯ ಎಂದು ಸೀತಾರಾಮನ್ ಹೇಳಿದ್ದಾರೆ. ಭಾರತದಲ್ಲಿ ಸ್ವಾವಲಂಬನೆ ಹಿಂದಿನಿಂದಲೂ ಇತ್ತು. ಆದರೆ ಕಾಲಕ್ರಮೇಣ ಕಡಿಮೆಯಾಗಿದೆ. ಈಗ ಆತ್ಮನಿರ್ಭರ ಭಾರತ ಸ್ಥಳೀಯ ಉತ್ಪಾದನೆಯನ್ನು ಬೆಂಬಲಿಸುತ್ತದೆ ಎಂದು ಸೀತಾರಾಮನ್ ಹೇಳಿದ್ದಾರೆ. ಇದೇ ವೇಳೆ ಲಡಾಖ್ ನಲ್ಲಿ ಹುತಾತ್ಮರಾದ ತಮಿಳುನಾಡಿನ ಯೋಧ, ಹವಾಲ್ದಾರ್ ಕೆ ಪಳನಿಗೆ ಗೌರವ ಅರ್ಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ