ಅನ್ ಲಾಕ್ ಸಮಯದಲ್ಲಿ ಜನರು ಇನ್ನಷ್ಟು ಎಚ್ಚರಿಕೆಯಿಂದ ಕೊರೋನಾ ಸಂಕಷ್ಟವನ್ನು ಎದುರಿಸಿ:ಪ್ರಧಾನಿ ಮೋದಿ ಕರೆ

ಪ್ರಧಾನಿ ನರೇಂದ್ರ ಮೋದಿ ಆಕಾಶವಾಣಿಯ ತಮ್ಮ ತಿಂಗಳ ಕೊನೆಯ ಭಾನುವಾರದ ಮನ್ ಕಿ ಬಾತ್ ಸರಣಿ ಕಾರ್ಯಕ್ರಮದಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳಲ್ಲಿ ಇಂದು ಭಾರತ ಸೇರಿದಂತೆ ಇಡೀ ಜಗತ್ತು ಎದುರಿಸುತ್ತಿರುವ ಕೊರೋನಾ ಸಮಸ್ಯೆ ಕೂಡ ಒಂದು.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆಕಾಶವಾಣಿಯ ತಮ್ಮ ತಿಂಗಳ ಕೊನೆಯ ಭಾನುವಾರದ ಮನ್ ಕಿ ಬಾತ್ ಸರಣಿ ಕಾರ್ಯಕ್ರಮದಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳಲ್ಲಿ ಇಂದು ಭಾರತ ಸೇರಿದಂತೆ ಇಡೀ ಜಗತ್ತು ಎದುರಿಸುತ್ತಿರುವ ಕೊರೋನಾ ಸಮಸ್ಯೆ ಕೂಡ ಒಂದು.

2020ನೇ ಸಾಲಿನ ಅರ್ಧ ವರ್ಷ ಮುಗಿದಿದೆ. ಈ ವರ್ಷ ಅತ್ಯಂತ ಕಠಿಣವಾದದ್ದು, ಯಾವತ್ತು ಮುಗಿಯುತ್ತೋ ಎಂದು ಜನರು ಸಾಮಾನ್ಯವಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಇತಿಹಾಸವನ್ನು ನೋಡಿದಾಗ ನಮ್ಮ ದೇಶಕ್ಕೆ ಯಾವುದೇ ರೀತಿಯ ಸಮಸ್ಯೆಗಳು, ಸವಾಲುಗಳು ಬಂದಿದ್ದರೆ ಭಾರತ ಅವುಗಳೆಲ್ಲವನ್ನೂ ಸಮರ್ಥವಾಗಿ ಎದುರಿಸಿ ಗೆಲುವಿನ ನಗೆ ಬೀರಿದೆ, ಇದು ಕೂಡ ಹಾಗೆಯೇ, 2020ನೇ ವರ್ಷವನ್ನು ಹಳಿದುಕೊಂಡು ಕೂರುವ ಬದಲು ನಾವು ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಯೋಚಿಸೋಣ ಎಂದು ಹೇಳಿದರು.

ಯಾವುದೇ ಯೋಜನೆ,ಕಾರ್ಯಕ್ರಮಗಳು, ಅಭಿಯಾನಗಳು ಜನರ ಸಂಪೂರ್ಣ ಪಾಲ್ಗೊಳ್ಳುವಿಕೆ, ಸಹಕಾರವಿಲ್ಲದೆ ಸಾಧ್ಯವಿಲ್ಲ. ಆತ್ಮನಿರ್ಭರ್ ಭಾರತ್ ಅಭಿಯಾನದಲ್ಲಿ ನಾನು ಜನರ ನಿರ್ಧಾರ, ನಂಬಿಕೆ, ಪರಿಶ್ರಮ, ಸಹಕಾರವನ್ನು ಬಯಸುತ್ತೇನೆ, 400 ವರ್ಷಗಳ ಹಿಂದೆ ದಾಳಿಕೋರರು ಭಾರತದ ಮೇಲೆ ದಾಳಿ ನಡೆಸಿದ್ದರು, ಭಾರತ ತನ್ನ ಸಂಸ್ಕೃತಿ, ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಎಂದು ಭಾವಿಸಲಾಗಿತ್ತು, ಆದರೆ ಅದಕ್ಕೆ ವಿರುದ್ಧವಾಗಿ ದೇಶದ ಭವ್ಯ ಪರಂಪರೆ ಇನ್ನಷ್ಟು ಬೆಳಗಿತು.ಭಾರತದ ಭವ್ಯ ಸಾಂಸ್ಕೃತಿಕ ಪರಂಪರೆಯಿಂದ ಈ ಹಿಂದೆ ಹಲವು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲಾಗಿದೆ. ಈ ಬಾರಿ ಕೂಡ ಕೊರೋನಾ ಸೇರಿದಂತೆ ಹಲವು ಸವಾಲುಗಳಿಂದ ಹೊರಬರುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳಿದರು.

ಕೊರೋನಾ ಲಾಕ್ ಡೌನ್ ಮುಗಿದು ಈಗ ಅನ್ ಲಾಕ್ ಸಮಯ, ಕೊರೋನಾ ಸೋಂಕು ಹೆಚ್ಚಾಗುತ್ತಿದೆ, ಇಂತಹ ಸಮಯದಲ್ಲಿ ನಾವು ಇನ್ನಷ್ಟು ಎಚ್ಚರಿಕೆಯಿಂದಿರಬೇಕು.ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮಾಡದಿದ್ದರೆ ನಿಮ್ಮನ್ನು ಅಪಾಯಕ್ಕೆ ಒಡ್ಡಿಕೊಂಡಂತೆ.ಅಸಡ್ಡೆ, ಅಜಾಗರೂಕತೆಯಿಂದ ಇರಬೇಡಿ ಎಂದು ಕರೆ ನೀಡಿದರು.

ಕಲ್ಲಿದ್ದಲು, ಅಂತರಿಕ್ಷ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿ ಭಾರತವನ್ನು ಹೆಚ್ಚು ಸ್ವಾವಲಂಬಿಯಾಗಿ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿದ ದೇಶವಾಗಿ ಕೊಂಡೊಯ್ಯುವುದು ಮುಖ್ಯವಾಗಿದೆ ಎಂದರು.

ಕೊರೋನಾ ಒಂದೆಡೆ ಸಂಕಷ್ಟಗಳನ್ನು ತಂದೊಡ್ಡಿದರೆ ಮತ್ತೊಂದೆಡೆ ಹಲವು ಅವಕಾಶಗಳನ್ನು  ನಮ್ಮ ಜನಾಂಗದವರಿಗೆ ನೀಡಿದೆ. ಸ್ಟಾರ್ಟ್ ಅಪ್ ಉದ್ಯಮಕ್ಕೆ ಇದು ಸಕಾಲ. ಭಾರತದ ಸಾಂಪ್ರದಾಯಿಕ ಆಟಗಳನ್ನು ಹೊಸ ಆಸಕ್ತಿಕರ ರೂಪದಲ್ಲಿ ತರಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com