ಲಡಾಖ್ ನಂತರ ಅರುಣಾಚಲ ಪ್ರದೇಶ ಗಡಿಯಲ್ಲೂ ಚೀನಾ ಚಟುವಟಿಕೆ ಚುರುಕು: ಭಾರತದ ಭೂಭಾಗ ಕಬಳಿಸಲು ಸಂಚು?

ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಭಾರತದ ಭೂಭಾಗವನ್ನು ಅತಿಕ್ರಮಿಸಲು ಯತ್ನಿಸಿದ್ದ ಚೀನಾ ಈಗ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಭಾಗಗಳಲ್ಲಿಯೂ ತನ್ನ ಸೇನಾ ಸಿಬ್ಬಂದಿಗಳ ನಿಯೋಜನೆ ಹಾಗೂ ಚಟುವಟಿಕೆಗಳನ್ನು ಚುರುಕುಗೊಳಿಸಿದೆ.
ಚೀನಾ ಸೇನೆ (ಸಂಗ್ರಹ ಚಿತ್ರ)
ಚೀನಾ ಸೇನೆ (ಸಂಗ್ರಹ ಚಿತ್ರ)
Updated on

ಅರುಣಾಚಲ ಪ್ರದೇಶ: ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಭಾರತದ ಭೂಭಾಗವನ್ನು ಅತಿಕ್ರಮಿಸಲು ಯತ್ನಿಸಿದ್ದ ಚೀನಾ ಈಗ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಭಾಗಗಳಲ್ಲಿಯೂ ತನ್ನ ಸೇನಾ ಸಿಬ್ಬಂದಿಗಳ ನಿಯೋಜನೆ ಹಾಗೂ ಚಟುವಟಿಕೆಗಳನ್ನು ಚುರುಕುಗೊಳಿಸಿದೆ. 
 
ಭಾರತ ಸರ್ಕಾರದ ಮೂಲಗಳಿಂದಲೇ ಲಭ್ಯವಾಗಿರುವ ಮಾಹಿತಿಗಳನ್ನಾಧರಿಸಿ ರಿಡೀಫ್ ಅಂತರ್ಜಾಲ ಪತ್ರಿಕೆ ಪ್ರಕಟಿಸಿರುವ ವರದಿಯ ಪ್ರಕಾರ, ಅರುಣಾಚಲ ಪ್ರದೇಶದಲ್ಲಿರುವ ಭಾರತದ ಗಡಿ ಭಾಗಗಳಲ್ಲಿ ಚೀನಾದ ಸೇನಾ ಸಿಬ್ಬಂದಿಗಳ ನಿಯೋಜನೆ ಹೆಚ್ಚುತ್ತಿದೆ. ಪಿಎಲ್ಎ ಸೈನಿಕರು ಗಸ್ತು ತಿರುಗುತ್ತಿರುವುದು ಹೆಚ್ಚಾಗುತ್ತಿದೆ ಹಾಗೂ ಅರುಣಾಚಲ ಪ್ರದೇಶದಲ್ಲಿರುವ ಮೆಕ್ ಮಹೊನ್ ರೇಖೆಯ ಬಳಿ ಗಡಿ ಪ್ರದೇಶಗಳ ಉಲ್ಲಂಘನೆಗೂ ಮುಂದಾಗುತ್ತಿದ್ದಾರೆ.

1962 ರಲ್ಲಿ ಚೀನಾದ ದಾಳಿಗೆ ತುತ್ತಾಗಿದ್ದ ಅರುಣಾಚಲ ಪ್ರದೇಶದ ತವಾಂಗ್ ಹಾಗೂ ವಾಲಾಂಗ್ ಸೆಕ್ಟರ್ ಗಳಲ್ಲಿ ಈಗಲೂ ಪಿಎಲ್ಎ ಚಟುವಟಿಕೆಗಳು ಹೆಚ್ಚಾಗಿ ಕಂಡುಬರುತ್ತಿದೆ. ತವಾಂಗ್ ನ ಪ್ರದೇಶದಲ್ಲಿ ಭಾರತದ ಓಲ್ಡ್ ಖಿನ್ಜ್ಮೇನ್ ಪೋಸ್ಟ್ ವರೆಗೂ ಎರಡು ಬಾರಿ ಚೀನಾದ ಸೇನಾ ಸಿಬ್ಬಂದಿಗಳು ಬಂದು ಭಾರತೀಯ ಯೋಧರ ಮೇಲೆ ಕೂಗಾಡಿದ್ದಾರೆ. ಓಲ್ಡ್ ಖಿನ್ಜ್ಮೇನ್ ಪೋಸ್ಟ್ ಮೆಕ್ ಮಹೊನ್ ರೇಖೆಯ ಭಾಗದಲ್ಲೇ ಇದ್ದು, ಇಲ್ಲಿಂದಲೇ 1959 ದಲೈ ಲಾಮ ಭಾರತಕ್ಕೆ ಪ್ರವೇಶಿಸಿದ್ದರು.

1962 ರ ಯುದ್ಧದ ವೇಳೆ ಚೀನಾದವರು ಮೊದಲು ದಾಳಿ ನಡೆಸಿದ್ದ  ನಾಮ್ ಕಾ ಚು ನದಿ ದಂಡೆಯ ಹತ್ತರದಲ್ಲೇ ಈ ಓಲ್ಡ್ ಖಿನ್ಜ್ಮೇನ್ ಪೋಸ್ಟ್ ಇದೆ. ಇನ್ನು ತವಾಂಗ್ ನಿಂದ ಮೆಕ್ ಮಹೊನ್ ಲೈನ್ ನಾದ್ಯಂತ ಇರುವ ಮುಖ್ಯ ಟಿಬೇಟಿಯನ್ ಗಡಿ ಪಟ್ಟಣ ತ್ಸೋನಾ ಜೊಂಗ್ ನಲ್ಲಿಯೂ ಪಿಎಲ್ಎ ತನ್ನ ಬೇಸ್ ಕ್ಯಾಂಪ್ ನ್ನು ಬಲಪಡಿಸಿಕೊಂಡಿದೆ.

ಇನ್ನು ಪೂರ್ವ ಭಾರತದ ತುದಿಯಲ್ಲಿರುವ ವಲಾಂಗ್ ಸೆಕ್ಟರ್ ನಲ್ಲಿಯೂ ಚೀನಾದ ಗಸ್ತು ತಿರುಗುವ ಪಡೆಯಿಂದ ಆಕ್ರಮಣಕಾರಿ ಚಟುವಟಿಕೆಗಳು ವರದಿಯಾಗಿವೆ. ಸಾಮಾನ್ಯವಾಗಿ ಈ ಪ್ರದೇಶದಲ್ಲಿರುತ್ತಿದ್ದ ಚೀನಾ ಸಿಬ್ಬಂದಿಗಳ ಸಂಖ್ಯೆ ಈಗ ದ್ವಿಗುಣಗೊಂಡಿದೆ.

ಮೆಕ್ ಮಹೊನ್ ಲೈನ್ ನಾದ್ಯಂತ ಹಲವು ಬಾರಿ ಪಿಎಲ್ಎ ಅತಿಕ್ರಮಣ ವರದಿಯಾಗಿದ್ದು, ಈ ಪ್ರದೇಸದಲ್ಲಿ ಚೀನಾದ ಸಿಬ್ಬಂದಿಗಳು ತಾತ್ಕಾಲಿಕ ಕ್ಯಾಂಪ್ ಗಳನ್ನು ಸ್ಥಾಪಿಸಿದ್ದಾರೆ.

ಭಾರತೀಯ ಸೇನೆಯ ಗುಪ್ತಚರ ಮಾಹಿತಿಯ ಪ್ರಕಾರ ಭಾರತ ಒಂದು ವೇಳೆ ದಾಳಿ ನಡೆಸಿದರೆ ಅದನ್ನು ಎದುರಿಸಲು ಚೀನಾ ಸಿದ್ಧಗೊಳ್ಳುತ್ತಿದೆ ಅಥವಾ ಲಡಾಖ್ ನಲ್ಲಿ ಭಾರತದ ಭೂಭಾಗವನ್ನು ಅತಿಕ್ರಮಿಸಿದಂತೆಯೇ ಇಲ್ಲಿಯೂ ಮಾಡಲು ಚೀನಾ ಯತ್ನಿಸುತ್ತಿದೆ. ಭಾರತ ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಚೀನಾದ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಏಪ್ರಿಲ್ ತಿಂಗಳಲ್ಲಿ ಲಡಾಖ್ ನಲ್ಲಿ ಪಿಎಲ್ಎ ಚಟುವಟಿಕೆಗಳನ್ನು ಸಾಮಾನ್ಯದ ತರಬೇತಿ ಎಂದು ತಪ್ಪಾಗಿ ಅರ್ಥೈಸಿಕೊಂಡಿತ್ತು ಭಾರತ. ಆದರೆ ಈ ಬಾರಿ ಅರುಣಾಚಲ ಪ್ರದೇಶದಲ್ಲಿನ ಚೀನಾ ಚಟುವಟಿಕೆಗಳನ್ನು ನಿಗ್ರಹಿಸಲು ಭಾರತ ಈ ಹಿಂದಿನ ತಪ್ಪನ್ನು ಮರುಕಳಿಸದೇ ಇರಲು ನಿರ್ಧರಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com