ಪ್ರಚೋದನಕಾರಿ ಭಾಷಣ: ಭದ್ರತಾ ಕಾರಣ ನೀಡಿ ತನಿಖೆಗೆ ಹಾಜರಾಗದ ಎಐಎಂಐಎಂ ವಕ್ತಾರ ಪಠಾಣ್
ಕಲಬುರಗಿ: ವಿವಾದಾತ್ಮಕ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ಎಐಎಂಐಎಂ ಪಕ್ಷದ ವಕ್ತಾರ ವಾರಿಸ್ ಪಠಾಣ್ ಅವರು, ಪ್ರಕರಣ ಸಂಬಂಧ ಭದ್ರತಾ ಕಾರಣ ನೀಡಿ ತನಿಖೆಗೆ ಹಾಜರಾಗಿಲ್ಲ ಎಂದು ವರದಿಗಳಿಂದ ತಿಳಿದುಬಂದಿದೆ.
ಪ್ರಕರಣ ಸಂಬಂಧ ಪಠಾಣ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು, ಈ ಸಂಬಂಧ ನಿನ್ನೆ ಪಠಾಣ್ ವಿಚಾರಣಗೆ ಹಾಜರಾಗಬೇಕಿತ್ತು. ಆದರೆ, ತಮ್ಮ ಜೀವಕ್ಕೆ ಬೆದರಿಕೆಯಿದ್ದು, ಸುರಕ್ಷತಾ ದೃಷ್ಟಿಯಿಂದ ವಿಚಾರಣಗೆ ಹಾಜರಾಗುತ್ತಿಲ್ಲ ಎಂದು ಪೊಲೀಸರಿಗೆ ಪತ್ರ ಬರೆದಿದ್ದಾರೆಂದು ವರದಿಗಳು ತಿಳಿಸಿವೆ.
ಈ ಕುರಿತಂತೆ ಪೊಲೀಸ್ ಆಯುಕ್ತ ಎಂಎನ್ ನಾಗರಾಜ್ ಅವರು ಹೇಳಿಕೆ ನೀಡಿ, ಜೀವಕ್ಕೆ ಬೆದರಿಕೆಯಿದೆ ಎಂದು ಪಠಾಣ್ ಹೆದರುತ್ತಿದ್ದಾರೆ. ಹೀಗಾಗಿ ಈ ಕುರಿತು ಪತ್ರವನ್ನು ಠಾಣೆಗೆ ಬರೆದು ಕಳುಹಿಸಿದ್ದಾರೆ. ಶನಿವಾರ ರಾತ್ರವರೆಗೂ ಕಾದು ನೋಡಲಾಗಿದೆ. ಆದರೂ ವಿಚಾರಣೆ ಹಾಜರಾಗಿಲ್ಲ. ಭಾನುವಾರ ಮತ್ತೆ ಎರಡನೇ ಬಾರಿ ನೋಟಿಸ್ ಜಾರಿ ಮಾಡಲಾಗುತ್ತದೆ. ಒಂದು ವೇಳೆ ಆ ನೋಟಿಸ್'ಗೂ ಪ್ರತಿಕ್ರಿಯೆ ನೀಡದಿದ್ದಲ್ಲಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.
ಒಂದು ವೇಳೆ ಪಠಾಣ್ ಅವರು ಭದ್ರತೆ ನೀಡುವಂತೆ ಮನವಿ ಮಾಡಿಕೊಂಡಿದ್ದೇ ಆದಲ್ಲಿ, ಭದ್ರತೆಯನ್ನು ನೀಡಲಾಗುತ್ತದೆ. ಮಹಾರಾಷ್ಟ್ರ ಸರ್ಕಾರದಿಂದಲೂ ಅವರಿಗೆ ಭದ್ರತೆ ಸಿಗಲಿದೆ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ