
ಚೆನ್ನೈ: ತಮಿಳಿನ ಖ್ಯಾತ ನಟ ವಿಜಯ್ ಅಭಿನಯದ ಮುಂಬರುವ ಬಹು ನಿರೀಕ್ಷಿತ 'ಮಾಸ್ಟರ್' ಚಿತ್ರದ ಸಹ ನಿರ್ಮಾಪಕ ಲಲಿತ್ ಕುಮಾರ್ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಕಳೆದ ಮಂಗಳವಾರ ಸಂಜೆಯಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಮುಂದುವರಿದಿದೆ. ವಿಜಯ್ ನಟನೆಯ ಮಾಸ್ಟರ್ ಚಿತ್ರಕ್ಕೆ ಸಂಬಂಧಿಸಿದಂತೆ ಐಟಿ ದಾಳಿಯಾಗುತ್ತಿರುವುದು ಇದು ಎರಡನೇ ಸಲ.
ಕಳೆದ ತಿಂಗಳು ನೈವೇಲಿಯಲ್ಲಿ ನಟ ವಿಜಯ್ ಮಾಸ್ಟರ್ ಚಿತ್ರೀಕರಣದಲ್ಲಿ ತೊಡಗಿದ್ದಾಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅವರ ಸಾಲಿಗ್ರಾಮಮ್ ಮತ್ತು ಪಣಿಯೂರು ನಿವಾಸಗಳ ಮೇಲೆ ದಾಳಿ ನಡೆಸಿದ್ದರು. ವಿಚಾರಣೆಗೆ ಚಿತ್ರೀಕರಣದ ಮಧ್ಯದಲ್ಲಿ ವಿಜಯ್ ಚೆನ್ನೈಗೆ ಆಗಮಿಸಿದ್ದರು.
ಹಿಂದೆ ವಿಜಯ್ ಅವರ ಬಿಗಿಲ್ ಚಿತ್ರ ನಿರ್ಮಾಣ ಮಾಡಿದ್ದ ಅಂಬು ಚೆಝಿಯಾನ್ ಅವರ ಕಚೇರಿ, ನಿವಾಸದ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸಿದ್ದ ಸಂದರ್ಭದಲ್ಲಿ 165 ಕೋಟಿ ರೂಪಾಯಿ ತೆರಿಗೆ ವಂಚಿಸಿದ್ದು ಬೆಳಕಿಗೆ ಬಂದಿತ್ತು.
ಫೈನಾನ್ಷಿಯರ್ ಒಬ್ಬರಿಗೆ ಸೇರಿದ್ದು ಎನ್ನಲಾದ ಚೆನ್ನೈ ಮತ್ತು ಮಧುರೈಯ ಗುಪ್ತ ಸ್ಥಳಗಳಲ್ಲಿ ಸಿಕ್ಕಿದ 77 ಕೋಟಿ ರೂಪಾಯಿ ನಗದು ಹಾಗೂ 1.25 ಕೆ.ಜಿ ಚಿನ್ನಾಭರಣಗಳಿಗೆ ಸಂಬಂಧಪಟ್ಟಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಶೋಧಕಾರ್ಯ ನಡೆಸುತ್ತಿದ್ದಾರೆ.
Advertisement