ಸೇನೆ ಆಯ್ತು, ಇನ್ನು ನೌಕಾಪಡೆಯಲ್ಲೂ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ: ಸುಪ್ರೀಂ ಕೋರ್ಟ್ ಆದೇಶ 

ಪುರುಷ ಮತ್ತು ಮಹಿಳಾ ಅಧಿಕಾರಿಗಳ ಮಧ್ಯೆ ಲಿಂಗ ತಾರತಮ್ಯ ತೋರದೆ ಸಮಾನವಾಗಿ ಕಾಣಬೇಕೆಂದು ಹೇಳಿರುವ ಸುಪ್ರೀಂ ಕೋರ್ಟ್ ನೌಕಾಪಡೆಯಲ್ಲಿ ಕೂಡ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ಸ್ಥಾಪಿಸಬೇಕೆಂದು ಆದೇಶ ಹೊರಡಿಸಿದೆ.
ಸೇನೆ ಆಯ್ತು, ಇನ್ನು ನೌಕಾಪಡೆಯಲ್ಲೂ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ: ಸುಪ್ರೀಂ ಕೋರ್ಟ್ ಆದೇಶ 

ನವದೆಹಲಿ: ಪುರುಷ ಮತ್ತು ಮಹಿಳಾ ಅಧಿಕಾರಿಗಳ ಮಧ್ಯೆ ಲಿಂಗ ತಾರತಮ್ಯ ತೋರದೆ ಸಮಾನವಾಗಿ ಕಾಣಬೇಕೆಂದು ಹೇಳಿರುವ ಸುಪ್ರೀಂ ಕೋರ್ಟ್ ನೌಕಾಪಡೆಯಲ್ಲಿ ಕೂಡ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ಸ್ಥಾಪಿಸಬೇಕೆಂದು ಮಂಗಳವಾರ ಮಹತ್ವದ ಆದೇಶ ಹೊರಡಿಸಿದೆ.


ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ದೇಶ ಸೇವೆಯನ್ನು ಮಾಡುವ ಮಹಿಳಾ ಅಧಿಕಾರಿಗಳಿಗೆ ಕೂಡ ಶಾಶ್ವತ ಆಯೋಗವನ್ನು ಸ್ಥಾಪಿಸದಿದ್ದರೆ ನ್ಯಾಯ ಒದಗಿಸಿದಂತೆ ಆಗುವುದಿಲ್ಲ. ನೌಕಾಪಡೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಲಿಂಗ ತಾರತಮ್ಯತೆ ತೋರಿಸಬಾರದು. ಪುರುಷ ಅಧಿಕಾರಿಯಂತೆ ಮಹಿಳಾ ಅಧಿಕಾರಿಗಳು ಕೂಡ ಅಷ್ಟೇ ದಕ್ಷತೆಯಿಂದ ಕೆಲಸ ಮಾಡಬಲ್ಲರು. ಹೀಗಾಗಿ ತಾರತಮ್ಯ ತೋರಿಸಬಾರದು ಎಂದು ಹೇಳಿದೆ.


ಅಷ್ಟೇ ಅಲ್ಲದೆ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಶಾಶ್ವತ ಆಯೋಗವನ್ನು ಇನ್ನು 3 ತಿಂಗಳೊಳಗೆ ಸ್ಥಾಪಿಸಬೇಕೆಂದು ಹೇಳಿದೆ.ಕಳೆದ ತಿಂಗಳು ಸೇನಾಪಡೆಯಲ್ಲಿ ಕೆಲಸ ಮಾಡುವ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ಸ್ಥಾಪಿಸಬೇಕೆಂದು ಹೇಳಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.ಅದಕ್ಕೆ ಸಮನಾಗಿ ಇಂದಿನ ಆದೇಶವನ್ನು ಕೂಡ ನೀಡಲಾಗಿದೆ.

ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಶಾರೀರಿಕ ಇತಿಮಿತಿಗಳ ಆಧಾರದ ಮೇಲೆ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ನೀಡದಿರುವುದು ಸರಿಯಲ್ಲ ಎಂದು ಕೂಡ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿದೆ. ಇದು ಸರ್ಕಾರದ ಲಿಂಗ ತಾರತಮ್ಯ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದೆ.ಕೇಂದ್ರ ಸರ್ಕಾರ 2008ರ ಸೆಪ್ಟೆಂಬರ್ ನಲ್ಲಿ ಶಾಶ್ವತ ಆಯೋಗವನ್ನು ಮಹಿಳಾ ಅಧಿಕಾರಿಗಳಿಗೆ ನೀಡಲು ನಿರ್ಧರಿಸಿತ್ತು. ಆದರೆ ಇದು ಸಣ್ಣ ಸೇವಾ ಆಯೋಗದಲ್ಲಿರುವ ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತಿತ್ತು. ಈ ಸೌಲಭ್ಯದಿಂದ ಸೇವಾನಿರತ ಮಹಿಳಾ ಅಧಿಕಾರಿಗಳನ್ನು ಹೊರಗಿಡಲಾಗಿತ್ತು. 

ಏನಿದು ಶಾಶ್ವತ ಆಯೋಗ: ಇಲ್ಲಿಯವರೆಗೆ ಸಣ್ಣ ಸೇವಾ ಆಯೋಗ(ಎಸ್ಎಸ್ ಸಿ)ಅಡಿಯಲ್ಲಿ ಮಹಿಳಾ ಅಧಿಕಾರಿಗಳು ಸೇವೆ ಆರಂಭವಾದ ದಿನದಿಂದ 10ರಿಂದ 14 ವರ್ಷಗಳವರೆಗೆ ನೌಕಾಪಡೆಯಲ್ಲಿ ಸೇವೆ ಸಲ್ಲಿಸಬಹುದಾಗಿತ್ತು. ಆದರೆ ಶಾಶ್ವತ ಆಯೋಗ ರಚನೆಯಾದ ಬಳಿಕ ನೌಕೆಯಲ್ಲಿ ತಮ್ಮ ಸೇವಾವಧಿಯ ವರ್ಷಗಳನ್ನು ಪರಿಗಣಿಸದೆ ತಾವು ನಿವೃತ್ತಿ ಹೊಂದುವವರೆಗೂ ಸೇವೆ ಸಲ್ಲಿಸಬಹುದಾಗಿದೆ. 


ಭಾರತೀಯ ಸೇನೆಯ ಯುದ್ಧರಹಿತ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ಮಹಿಳಾ ಅಧಿಕಾರಿಗಳಿಗೆ ಪುರುಷ ಅಧಿಕಾರಿಗಳಿಗೆ ಸಮನಾಗಿ ಶಾಶ್ವತ ಆಯೋಗ ನೀಡಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದ್ದು ಇದರಿಂದ ಮಹಿಳಾ ಅಧಿಕಾರಿಗಳು ಸಣ್ಣ ಸೇವಾ ಆಯೋಗದಲ್ಲಿ ಸೇವೆ ಸಲ್ಲಿಸಿದ ಬಳಿಕವೂ ಮುಂದುವರಿಯಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com