2ನೇ ಭಾಷಣದಲ್ಲೂ ಅಗತ್ಯ ನೆರವಿನ ಕ್ರಮ, ಪರಿಹಾರ ಪ್ರಕಟಿಸದಿರುವುದರಿಂದ ನಿರಾಶೆ: ಪ್ರಧಾನಿಗೆ ಯೆಚೂರಿ ಬಹಿರಂಗ ಪತ್ರ

ಪ್ರಧಾನಿ ಮೋದಿ ತಮ್ಮ 2ನೇ ಭಾಷಣದಲ್ಲೂ ಕೊರೋನಾ ವೈರಸ್ ಕುರಿತಂತೆ ಸಾರ್ವಜನಿಕರಿಗೆ ಅಗತ್ಯ ನೆರವಿನ ಕ್ರಮ, ಪರಿಹಾರ ಪ್ರಕಟಿಸದಿರುವುದರಿಂದ ನಿರಾಶೆಯಾಗಿದೆ ಎಂದು ಸಿಪಿಐಎಂ ಪಾಲಿಟ್‌ ಬ್ಯುರೋ ಸದಸ್ಯ ಸೀತಾರಾಂ ಯೆಚೂರಿ ಹೇಳಿದ್ದಾರೆ.
ಸೀತಾರಾಮ್ ಯೆಚೂರಿ
ಸೀತಾರಾಮ್ ಯೆಚೂರಿ

ನವದೆಹಲಿ: ಪ್ರಧಾನಿ ಮೋದಿ ತಮ್ಮ 2ನೇ ಭಾಷಣದಲ್ಲೂ ಕೊರೋನಾ ವೈರಸ್ ಕುರಿತಂತೆ ಸಾರ್ವಜನಿಕರಿಗೆ ಅಗತ್ಯ ನೆರವಿನ ಕ್ರಮ, ಪರಿಹಾರ ಪ್ರಕಟಿಸದಿರುವುದರಿಂದ ನಿರಾಶೆಯಾಗಿದೆ ಎಂದು ಸಿಪಿಐಎಂ ಪಾಲಿಟ್‌ ಬ್ಯುರೋ ಸದಸ್ಯ ಸೀತಾರಾಂ ಯೆಚೂರಿ ಹೇಳಿದ್ದಾರೆ.

ನಿನ್ನೆ ರಾತ್ರಿ ಪ್ರಧಾನಿ ಮೋದಿ ಮಾಡಿದ್ದ ಭಾಷಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸೀತಾರಾಂ ಯೆಚೂರಿ ಅವರು, 'ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೋವಿಡ್-19ರ ವಿರುದ್ಧ ಸಮರದ ಸಂದರ್ಭದಲ್ಲಿ ಮಾರ್ಚ್ 24ರಂದು ಇಡೀ  ದೇಶವನ್ನುದ್ದೇಶಿಸಿ ಮತ್ತೊಂದು ಭಾಷಣ ಮಾಡಿದ್ದು, ಇದರಲ್ಲೂ ಬಡವರು ಮತ್ತು ನೆರವಿನ ಅಗತ್ಯವಿರುವವವರಿಗೆ ಪರಿಹಾರ ಒದಗಿಸುವ, ಈ ದಿಗ್ಬಂಧನದಲ್ಲಿ ಬದುಕುಳಿಯಲು ತುರ್ತು ಸಹಾಯ ಬೇಕಾದವರ ಸಂಕಟಗಳನ್ನು ಶಮನ ಮಾಡುವ, ಯಾವುದೇ ಕ್ರಮಗಳನ್ನು ಪ್ರಕಟಿಸಿಲ್ಲ.  ಇದರಿಂದ ಜನರಿಗೆ ನಿರಾಸೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

15000 ಕೋಟಿ ರೂ.ಗಳ ಆರೋಗ್ಯ ಪಾಲನೆಯ “ಪ್ಯಾಕೇಜ್” ಪ್ರಕಟಿಸಿದ್ದಾರೆ, ಆದರೆ ಇದರಲ್ಲೂ ಕೆಲವು ಅಚ್ಚರಿಗಳಿವೆ. “5 ಟ್ರಿಲಿಯನ್ ಅರ್ಥವ್ಯವಸ್ಥೆ”ಯ ಬಗ್ಗೆ, ಆರ್ಥಿಕ ರಂಗದಲ್ಲಿ ದಾಪುಗಾಲಿನ ಮುನ್ನಡೆಯ ಬಗ್ಗೆ ಹೇಳುವುದನ್ನು ಪದೇ-ಪದೇ ಕೇಳುತ್ತ ಬಂದಿದ್ದೇವೆ. ಅದು ನಿಜವಾಗಿದ್ದರೆ,  ನಮಗೆ ಕೇವಲ 15000 ಕೋಟಿ ರೂ.ಗಳನ್ನು ಮಾತ್ರವೇ ಇದಕ್ಕೆ ವೆಚ್ಚ ಮಾಡುವ ಶಕ್ತಿಯಿರುವುದೇ? ಅಂದರೆ ಒಬ್ಬ ನಾಗರಿಕರಿಗೆ ಆರೋಗ್ಯಕ್ಕಾಗಿ ಕೇವಲ 112 ರೂ. ಮಾತ್ರ?. 7.78 ಲಕ್ಷ ಕೋಟಿ ರೂ.ಗಳನ್ನು ಶ್ರೀಮಂತ ಕಾರ್ಪೊರೇಟ್‌ಗಳನ್ನು ಪಾರುಮಾಡಲು, ಅಥವಾ ಅವರಿಗೆ  1.76 ಲಕ್ಷ ಕೊಟಿ ರೂ.ಗಳ ತೆರಿಗೆ ರಿಯಾಯ್ತಿಗಳನ್ನು ಪ್ರಕಟಿಸಬಹುದಾದರೆ, ಇಂತಹ ಒಂದು ಗಂಭೀರ ಅಪಾಯವನ್ನು ಎದುರಿಸುತ್ತಿರುವ ನಮ್ಮ ಜನಗಳ ಆರೋಗ್ಯಕ್ಕೆ ಇದಕ್ಕಿಂತ ಹೆಚ್ಚು ಹಣ ಕೊಡಲು ಖಂಡಿತಾ ನಮಗೆ ಸಾಧ್ಯವಿದೆ ಎಂದು ಹೇಳಿರುವ ಯೆಚೂರಿ, “ನೀವು ಬಡ ಜೀವಗಳನ್ನು  ಉಳಿಸಲು ಬೇಕಾದ ಹಣಕಾಸಿಗಾಗಿ ಸೂಪರ್ ಶ್ರೀಮಂತರ ಮೇಲೆ ತೆರಿಗೆ ಹಾಕುತ್ತಿಲ್ಲವೇಕೆ?” ಎಂದು ತಮ್ಮ ಬಹಿರಂಗ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಈಗ ಈ ಕ್ಷಣದಲ್ಲಿ ಮಹಾಮಾರಿಯನ್ನು ಎದುರಿಸಲು ನಮಗೆ ಬೇಕಾದ ಸಾಮಾಜಿಕ ಅಂತರಕ್ಕೆ ತದ್ವಿರುದ್ಧವಾಗಿದೆ. ಈ ವರ್ಷದ ಆರಂಭದಲ್ಲೇ ಇಂತಹ ಒಂದು ಮಹಾಮಾರಿ ಹರಡುವ ಎಚ್ಚರಿಕೆಗಳಿದ್ದರೂ ಬಜೆಟ್‌ನಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ವೆಚ್ಚವನ್ನು ಕಡಿತ ಮಾಡಿದ್ದು ಕ್ರಿಮಿನಲ್ ನಡೆ,  ಅದು ಭಾರತವನ್ನು ಹೆಚ್ಚು ಅಪಾಯಕ್ಕೀಡು ಮಾಡಿದೆ. ಆದರೆ ಈಗಲಾದರೂ ಅದನ್ನು ಸರಿಪಡಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೈರಸ್ ನಿಂದ ಬಳಲುತ್ತಿರುವ ಹಲವು ರಾಷ್ಟ್ರಗಳು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದು, ಈ ಪೈಕಿ ನೌಕರರಿಗೆ ಶೇ.80ರಷ್ಟು ವೇತನ  ಭರವಸೆ ನೀಡಲಾಗಿದೆ. ಅಲ್ಲದೆ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಇಂತಹ ಯಾವುದೇ ಪ್ಯಾಕೇಜ್ ಅನ್ನು ಪ್ರಧಾನಿ ಮೋದಿ ಘೋಷಣೆ ಮಾಡಿಲ್ಲ. ಕೇವಲ ಲಾಕ್ ಡೌನ್ ನಿಂದ ವೈರಸ್ ಅನ್ನು ನಿಯಂತ್ರಿಸಬಹುದೇ ಹೊರತು ಜನ  ಸಾಮಾನ್ಯರ ಜೀವನವನ್ನಲ್ಲ ಎಂದು ಕಿಡಿಕಾರಿದ್ದಾರೆ.

ಲಾಕ್ ಡೌನ್ ನಿಂದ ಶಾಲೆಗಳು ಸ್ಥಗಿತವಾಗಿದ್ದು, ಇದರಿಂದ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟ ವಿತರಣೆ ಕೂಡ ಸ್ಥಗಿತವಾಗಿದೆ. ಹೀಗಾಗಿ ಇದರ ಸಂಪನ್ಮೂಲವನ್ನು ಪ್ರಧಾನಿ ಮೋದಿ ಸೂಕ್ತರೀತಿಯಲ್ಲಿ ಬಳಸಿಕೊಳ್ಳಬೇಕು. ರೇಷನ್ ಕಾರ್ಡ್ ಹೊಂದಿರುವವರಿಗೆ 2 ತಿಂಗಳ ಉಚಿತ  ರೇಷನ್ ವಿತರಿಸಬೇಕು ಮತ್ತು ಬಡವರಿಗೆ ಉಚಿತ ರೇಷನ್ ಕಿಟ್ ನೀಡಬೇಕು ಎಂದು ಯೆಚೂರಿ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com