

ಚಂಡೀಗಢ: ಪಂಜಾಬ್ ನಲ್ಲಿ ಕೊರೋನಾ ವೈರಸ್ ನಿಂದ ಸಾವನ್ನಪ್ಪಿದ ವ್ಯಕ್ತಿಯಿಂದ 23 ಮಂದಿಗೆ ಸೋಂಕು ಹರಡಿದ್ದು, 100 ಮಂದಿ ಜೊತೆ ಸಂಪರ್ಕ ಸಾಧಿಸಿದ್ದ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ.
ಹೌದು.. ಇದೇ ಮಾರ್ಚ್ 18ರಂದು ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಪಂಜಾಬ್ ನಲ್ಲಿ ಸಾವನ್ನಪ್ಪಿದ್ದ 70 ವರ್ಷದ ವ್ಯಕ್ತಿ ಗುರುದ್ವಾರ ಧರ್ಮಗುರು ತನ್ನ ಸಾವಿಗೂ ಮುನ್ನ ಬರೊಬ್ಬರಿ 23 ಮಂದಿಗೆ ಸೋಂಕು ಹರಡುಂತೆ ಮಾಡಿದ್ದು, ಇದಲ್ಲದೆ ಬರೊಬ್ಬರಿ 100 ಮಂದಿಯೊಂದಿಗೆ ನೇರ ಸಂಪರ್ಕ ಸಾಧಿಸಿದ್ದನಂತೆ. ಅಲ್ಲದೆ ಈತನ ಸಂಪರ್ಕಕ್ಕೆ ಬಂದಿದ್ದ ಸುಮಾರು 15 ಗ್ರಾಮಗಳ ಗ್ರಾಮಸ್ಥರು ಇದೀಗ ಸೋಂಕಿಗೆ ತುತ್ತಾಗುವ ಭೀತಿ ಎದುರಿಸುತ್ತಿದ್ದು, ಇದೇ ಕಾರಣಕ್ಕೆ ಈ 15 ಗ್ರಾಮಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
ಪಂಜಾಬ್ ನಲ್ಲಿ ಪ್ರಸ್ತುತ ದಾಖಲಾಗಿರುವ 33 ಸೋಂಕು ಪ್ರಕರಣಗಳ ಪೈಕಿ 23 ಪ್ರಕರಣಗಳ ಮೂಲ ಇದೇ 70 ವರ್ಷದ ಗುರುದ್ವಾರ ಧರ್ಮಗುರು ಎನ್ನಲಾಗಿದೆ. ಈ ಹಿಂದೆ ಜರ್ಮನಿ ಮತ್ತು ಇಟಲಿಗೆ ತೆರಳಿದ್ದ ಈತನಿಗೆ ಸೋಂಕು ತಗುಲಿತ್ತು. ಈತನೊಂದಿಗೆ ತೆರಳಿದ್ದ ಅಕ್ಕಪಕ್ಕದ ಗ್ರಾಮದ ಇಬ್ಬರು ವ್ಯಕ್ತಿಗಳಲ್ಲೂ ಸೋಂಕು ದೃಢಪಟ್ಟಿತ್ತು.
ಈತನ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡಿರುವ ಅಧಿಕಾರಿಗಳ ಪ್ರಕಾರ ಮಾರ್ಚ್ 6ರಂದು ದೆಹಲಿಗೆ ಆಗಮಿಸಿದ್ದ ಈ ಧರ್ಮಗುರು ಅಲ್ಲಿಂದ ಪಂಜಾಬ್ ಗೆ ಆಗಮಿಸಿದ್ದ.ಬಳಿಕ ಮಾರ್ಚ್ 8 ರಿಂದ 10ರ ನಡುವಿನ 2 ದಿನ ಆನಂದ್ ಪುರ್ ಸಾಹಿಬ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ದೊಂಡಿದ್ದ. ಬಳಿಕ ತನ್ನ ಶಾಹೀದ್ ಭಗತ್ ಸಿಂಗ್ ನಗರಕ್ಕೆ ಆಗಮಿಸಿದ್ದ ಈತ ಈ ಮಾರ್ಗಗಳಲ್ಲಿ ಬರೊಬ್ಬರಿ 100 ಮಂದಿಯನ್ನು ಸಂಪರ್ಕಿಸಿದ್ದ. ಅಲ್ಲದೆ ಈತನೊಂದಿಗೆ ವಿದೇಶಕ್ಕೆ ತೆರಳಿ ಸೋಂಕು ಅಂಟಿಸಿಕೊಂಡಿದ್ದ ಈತನ ಇಬ್ಬರು ಅನುಯಾಯಿಗಳು ಬಳಿಕ ಬರೊಬ್ಬರಿ 15 ಗ್ರಾಮಗಳಲ್ಲಿ ಸುತ್ತಾಡಿದ್ದಾರೆ. ಈ ಪೈಕಿ ಇವರು ಸುತ್ತಾಡಿದ ಗ್ರಾಮಗಳಲ್ಲಿ 14 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಅಲ್ಲದೆ ಇವರು ಪಂಜಾಬ್ ಗೆ ಆಗಮಿಸಿದ ಬಳಿಕ ಇವರ ಸಂಪರ್ಕಕ್ಕೆ ಬಂದಿದ್ದ ಮೊಮ್ಮಗಳು ಮತ್ತು ಮೊಮ್ಮಗ ಕೂಡ ಅನೇಕರನ್ನು ಸಂಪರ್ಕಿಸಿದ್ದು, ಅವರಿಗೂ ಸೋಂಕು ತಗುಲಿರುವ ಸಾಧ್ಯತೆ ಇದೆ. ಹೀಗಾಗಿ ಅಧಿಕಾರಿಗಳು ಇವರು ಭೇಟಿ ನೀಡಿದ್ದ ಎಲ್ಲ ಪ್ರದೇಶಗಳಲ್ಲಿ ಟ್ರಾಕ್ ಮಾಡಿ ಒಟ್ಟಾರೆ 15 ಗ್ರಾಮಗಳನ್ನು ಸೀಲ್ ಮಾಡಿದ್ದಾರೆ. ಅಲ್ಲದೆ ಈ ಗ್ರಾಮಗಳ ನಿವಾಸಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಅಲ್ಲದೆ ಪಂಜಾಬ್ ನ ನವಾನ್ಶಹರ್, ಮೊಹಾಲಿ, ಅಮೃತಸರ, ಹೋಶಿಯಾರ್ಪುರ ಮತ್ತು ಜಲಂಧರ್ ನಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದೆ.
ಒಟ್ಟಾರೆ ಈ ಮೂವರ ಬೇಜವಾಬ್ದಾರಿ ತನದಿಂದಾಗಿ ಪಂಜಾಬ್ ನಲ್ಲಿ ಮಾರಕ ಕೊರೋನಾ ವೈರಸ್ ಬರೊಬ್ಬರಿ 15 ಗ್ರಾಮಗಳಿಗೆ ವಿಸ್ತಾರವಾಗಿದೆ.