

ನವದೆಹಲಿ: ಕೆಮ್ಮು, ಉಸಿರಾಟ ಹಾಗೂ ಮಾತಿನ ಶಬ್ದದಿಂದ ಕೊರೋನಾ ಪತ್ತೆಹಚ್ಚಬಹುದೇ? ಬೆಂಗಳೂರು ಐಐಎಸ್ ಸಿ ವಿಜ್ಞಾನಿಗಳು ಈ ಶಬ್ದದಿಂದ ಕೊರೋನಾ ಪತ್ತೆ ಹಚ್ಚುವ ನಿಟ್ಟಿನಲ್ಲಿ ಪ್ರಯೋಗ ನಡೆಸುತ್ತಿದ್ದಾರೆ.
ಅತಿ ಶೀಘ್ರವಾಗಿ ಕೊರೋನಾ ಪತ್ತೆ ಹಚ್ಚಲು ಇದು ಸಾಧ್ಯವಾಗುತ್ತದೆ. ಕೊರೋನೊ ರೋಗಿಗಳು ಇತರ ಶ್ವಾಸಕೋಶ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿರುವವರಿಗಿಂತ ಭಿನ್ನವಾಗಿ ಕೆಮ್ಮುತ್ತಾರೆ ಎಂದು ಹೇಳಿದ್ದಾರೆ.
ಈ ರೀತಿಯ ಪರೀಕ್ಷೆ ಮಾಡಲು ಈ ವಿಜ್ಞಾನಿಗಳು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ (ಐಸಿಎಂಆರ್) ಅನುಮೋದನೆ ಪಡೆದಿದ್ದಾರೆ. ಕೋಸ್ವಾರ ಪ್ರಾಜೆಕ್ಟ್ ನ ಹೆಸರಾಗಿದ್ದು, ಕೋವಿಡ್ ರೋಗಿಗಳನ್ನು ಪತ್ತೆ ಹಚ್ಚಲು ಇದೊಂದು ಸರಳ ವಿಧಾನವಾಗಿದೆ.
ಕೊರೋನಾ ಪತ್ತೆ ಹಚ್ಚುವ ಸಾಧನವನ್ನು ವೆಬ್ / ಮೊಬೈಲ್ ಅಪ್ಲಿಕೇಶನ್‌ನಂತೆ ಬಿಡುಗಡೆ ಮಾಡುವ ಗುರಿ ತಂಡಕ್ಕಿದೆ. ಈ ಅಪ್ಲಿಕೇಶನ್ ಗೆ ವಾಯ್ಸ್ ರೆಕಾರ್ಡ್ ಮಾಡಿ ಮಾದರಿಗಳನ್ನು ಕಳುಹಿಸಬಹುದಾಗಿದೆ. ಜೊತೆಗೆ, ಕೋವಿಡ್-19 ಸೋಂಕು ಪತ್ತೆ ಹಚ್ಚಲು ಇದು ಸಹಾಯವಾಗುತ್ತದೆ. ಇದರಿಂದ ಸೋಂಕು ತಡೆಯಲು ಸಾಧ್ಯವಾಗುತ್ತದೆ.
ಕಳೆದ ಮಾರ್ಚ್ ತಿಂಗಳ ಅಂತ್ಯದಿಂದ ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 7 ವಿಜ್ಞಾನಿಗಳ ತಂಡ ಶ್ರೀರಾಮ್ ಗಣಪತಿ ಅವರ ನೇತೃತ್ವದಲ್ಲಿ ಕೆಲಸ ಆರಂಭಿಸಿತು. ಕೊರೋನಾ ಮತ್ತು ಇತರ ಶ್ವಾಸಕೋಶ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರ ಡೇಟಾ ವನ್ನು ಸ್ಮಾರ್ಟ್ ಫೋನ್ ಗಳಲ್ಲಿ ಸಂಗ್ರಹಿಸಲಾಯಿತು.
ಎರಡು ರೋಗಿಗಳ ಕೆಮ್ಮಿನ ಧ್ವನಿ ವಿಭಿನ್ನವಾಗಿತ್ತು. ಆದರೆ ನಿರ್ಣಯಕ್ಕೆ ಬರಲು ಸಾಧ್ಯವಾಗಲಿಲ್ಲ, ಏಕೆಂದರೆ ಮಾದರಿ ತೀರಾ ಕಡಿಮೆ ಪ್ರಮಾಣದ್ದಾಗಿತ್ತು. ಹೀಗಾಗಿ ಆಸ್ಪತ್ರೆ ಮೊರೆ ಹೋಗಿದ್ದಾಗಿ ತಿಳಿಸಿದ್ದಾರೆ. ಡೇಟಾ ಹಂಚಿಕೆಗೆ ಸಂಬಂಧಿಸಿದ ಸಮಸ್ಯೆಗಳಿದ್ದು, ಆಂತರಿಕ ನಿಯಮಗಳಿಂದಾಗಿ ಮತ್ತು ಡೇಟಾ ಸಂಗ್ರಹಣೆ ಅನುಮೋದನೆಗಾಗಿ ನಾವು ಐಸಿಎಂಆರ್ ಅನ್ನು ಸಂಪರ್ಕಿಸಿದೆವು ಎಂದು ಗಣಪತಿ ಹೇಳಿದ್ದಾರೆ.
ಈ ಪ್ರಾಜೆಕ್ಟ್ ಸಂಶೋಧನೆಯ ಸಮಯದಲ್ಲಿ, ತಂಡವು ಯುಎಸ್ ಮೂಲದ ಆಸಕ್ತಿದಾಯಕ ಸಂಶೋಧನಾ ಪ್ರಬಂಧವನ್ನು ಕಂಡುಹಿಡಿದಿದೆ, ಕೊರೋನಾ ರೋಗಿಯ ಕೆಮ್ಮು ಶ್ವಾಸಕೋಶ ಸೋಂಕಿನಂತಹ ಇತರ ಉಸಿರಾಟದ ಕಾಯಿಲೆಗಳಿಗಿಂತ ಬಹಳ ಭಿನ್ನವಾಗಿದೆ ಎಂದು ತೋರಿಸುತ್ತದೆ ಎಂದು ಹೇಳಿತ್ತು. ಮೇ ತಿಂಗಳಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿತ್ತು. ಇದರಿಂದ ನಮ್ಮ ಉತ್ಸಾಹ ಮತ್ತಷ್ಟು ಇಮ್ಮಡಿಯಾಯಿತು ಎಂದು ಹೇಳಿದ್ದಾರೆ.
Advertisement