ಬಿಹಾರ ವಿಧಾನಸಭಾ ಚುನಾವಣೆ: 2ನೇ ಹಂತದ ಮತದಾನ ಆರಂಭ, 1,463 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

ಬಿಹಾರ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನ ಮಂಗಳವಾರದಿಂದ ಆರಂಭವಾಗಿದ್ದು, ಈ ಹಂತದಲ್ಲಿ 94 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ವಿವಿಧ ಪಕ್ಷಗಳ ಒಟ್ಟು 1463 ಮಂದಿ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಚುನಾವಣಾ ಕರ್ತವ್ಯ ನಿಭಾಯಿಸುತ್ತಿರುವ ಭದ್ರತಾ ಸಿಬ್ಬಂದಿಗಳು
ಚುನಾವಣಾ ಕರ್ತವ್ಯ ನಿಭಾಯಿಸುತ್ತಿರುವ ಭದ್ರತಾ ಸಿಬ್ಬಂದಿಗಳು

ಪಾಟ್ನ: ಬಿಹಾರ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನ ಮಂಗಳವಾರದಿಂದ ಆರಂಭವಾಗಿದ್ದು, ಈ ಹಂತದಲ್ಲಿ 94 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ವಿವಿಧ ಪಕ್ಷಗಳ ಒಟ್ಟು 1463 ಮಂದಿ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. 

ಬಿಹಾರದಲ್ಲಿ ಮುಂದಿನ ಸರ್ಕಾರ ಯಾರದ್ದು ಎನ್ನುವುದನ್ನು ಬಹುತೇಕ ಈ ಹಂತ ನಿರ್ಧರಿಸಲಿದ್ದು 2.86 ಕೋಟಿ ಮತದಾರರು 1463 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆಯ 6 ಗಂಟೆ ವರೆಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 

ಕೊರೊನಾ ಕಾರಣದಿಂದಾಗಿ ಒಂದು ಗಂಟೆ ಮತದಾನದ ಸಮಯ ಹೆಚ್ಚಿಸಿದ್ದು ಕೊನೆಯ ಒಂದು ಗಂಟೆ ಅವಧಿಯಲ್ಲಿ ಕೊರೊನಾ ಸೋಂಕಿತರು ಹಕ್ಕು ಚಲಾಯಿಸಬಹುದಾಗಿದೆ. 

ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಮತಗಟ್ಟೆಗಳಲ್ಲಿ ಸಾಮಾಜಿಕ ಅಂತರ, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. 80 ವರ್ಷಕ್ಕೂ ಹೆಚ್ಚಿನವರಿಗೆ ಅಂಚೆ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತೆ ಇನ್ನಷ್ಟು ಬಿಗಿಗೊಳಿಸಲಾಗಿದೆ.

2ನೇ ಹಂತದ ಚುನಾವಣೆಯಲ್ಲಿ ವಿರೋಧ ಪಕ್ಷ ಆರ್'ಜೆಡಿ ನಾಯಕ, ಲಾಲು ಯಾದವ್ ಪುತ್ರ ತೇಜಸ್ವಿ ಯಾದವ್, ನಿತೀಶ್ ಸರ್ಕಾರದ ನಾಲ್ವರು ಸಚಿವರು, ನಟ ಶತ್ರುಘ್ನ ಸಿನ್ಹಾರ ಪುತ್ರ, ಕಾಂಗ್ರೆಸ್'ನ ಲವ್ ಸಿನ್ಹಾ ಕಣದಲ್ಲಿದ್ದಾರೆ. ಹೀಗಾಗಿ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ. 

ಮುಖ್ಯಮಂತ್ರಿ ನಿತೀಶ್ ತವರು ನಳಂದಾ ಜಿಲ್ಲೆ ವ್ಯಾಪ್ತಿಗೆ ಬರುವ 7 ವಿಧಾನಸಭೆಗೂ ಚುನಾವಣೆ ನಡೆಯುತ್ತಿದೆ. ಹೀಗಾಗಿ ಈ ಹಂತ ನಿತೀಶ್ ಪಾಲಿಗೂ ಅಗ್ನಿ ಪರೀಕ್ಷೆಯಾಗಿದೆ. 

ರಾಜ್ಯ ವಿಧಾನಸಭೆ 243 ಸ್ಥಾನಗಳ ಪೈಕಿ ಅ.28ರಂದು 71 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆದಿತ್ತು. ಇದರಲ್ಲಿ ಶೇ.53.46ರಷ್ಟು ಪ್ರಮಾಣದ ಮತದಾನವಾಗಿದ್ದು, ನ.7 ರಂದು 78 ಸ್ಥಾನಗಳಿಗೆ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com