ಕ್ರಿಮಿನಲ್ ಕಾನೂನು ಪ್ರಜೆಗಳ ಮೇಲಿನ ಕಿರುಕುಳಕ್ಕೆ ಅಸ್ತ್ರವಾಗಬಾರದು: ಅರ್ನಬ್ ಗೋಸ್ವಾಮಿ ಜಾಮೀನು ಅವಧಿ ವಿಸ್ತರಿಸಿದ ಸುಪ್ರೀಂ ಕೋರ್ಟ್

ಕ್ರಿಮಿನಲ್ ಕಾನೂನು ಆಯ್ದ ಕಿರುಕುಳಕ್ಕೆ ಅಸ್ತ್ರವಾಗಬಾರದು ಎಂಬುದನ್ನು ನ್ಯಾಯಾಂಗ ಖಚಿತ ಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು, 2018ರಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರ ಜಾಮೀನು  ಅವಧಿಯನ್ನು ವಿಸ್ತರಿಸಿದೆ.
ಅರ್ನಾಬ್ ಗೋಸ್ವಾಮಿ
ಅರ್ನಾಬ್ ಗೋಸ್ವಾಮಿ
Updated on

ನವದೆಹಲಿ: ಕ್ರಿಮಿನಲ್ ಕಾನೂನು ಆಯ್ದ ಕಿರುಕುಳಕ್ಕೆ ಅಸ್ತ್ರವಾಗಬಾರದು ಎಂಬುದನ್ನು ನ್ಯಾಯಾಂಗ ಖಚಿತ ಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು, 2018ರಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರ ಜಾಮೀನು  ಅವಧಿಯನ್ನು ವಿಸ್ತರಿಸಿದೆ.

ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಅರ್ನಬ್‌ ಮತ್ತು ಇತರ ಇಬ್ಬರು ವ್ಯಕ್ತಿಗಳಿಗೆ ನೀಡಿರುವ ಮಧ್ಯಂತರ ಜಾಮೀನು ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು, ಈ ವೇಳೆ ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ರಿಪಬ್ಲಿಕ್‌ ಟಿ.ವಿ  ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಇತರೆ ಇಬ್ಬರ ಅರ್ಜಿಗಳನ್ನು ಬಾಂಬೆ ಹೈಕೋರ್ಟ್‌ ವಿಲೇವಾರಿ ಮಾಡುವವರೆಗೂ, ಅವರಿಗೆ ನೀಡಿರುವ ಮಧ್ಯಂತರ ಜಾಮೀನು ಮುಂದುವರಿಯಲಿದೆ ಎಂದು ಹೇಳಿದೆ. 

ಅಂತೆಯೇ 'ಆಡಳಿತ ನಡೆಸುವವರಿಂದ ಕ್ರಿಮಿನಲ್‌ ಕಾನೂನುಗಳು ದುರ್ಬಳಕೆ ಆಗದಂತೆ ನ್ಯಾಯಾಂಗ ನೋಡಿಕೊಳ್ಳಬೇಕು. ಜತೆಗೆ ಕ್ರಿಮಿನಲ್ ಕಾನೂನುಗಳು ನಾಗರಿಕರಿಗೆ ಕಿರುಕುಳ ನೀಡುವ ಅಸ್ತ್ರವಾಗಿ ಬಳಕೆಯಾಗಿಲ್ಲ ಎಂಬುದನ್ನು ನ್ಯಾಯಾಂಗ ಖಚಿತಪಡಿಸಿಕೊಳ್ಳಬೇಕು. ರಾಜ್ಯ  ಸರ್ಕಾರವು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ತೋರಿಸಿದ ಪ್ರಜೆಗೆ ಈ ನ್ಯಾಯಾಲಯದ ಬಾಗಿಲುಗಳನ್ನು ಮುಚ್ಚಲಾಗುವುದಿಲ್ಲ ಎಂದು ಪೀಠ ಇದೇ ವೇಳೆ ತಿಳಿಸಿದೆ. ಅಲ್ಲದೆ ಜಾಮೀನು ಅರ್ಜಿಗಳನ್ನು ನಿರ್ವಹಿಸುವಲ್ಲಿನ ವಿಳಂಬದ ಸಾಂಸ್ಥಿಕ ಸಮಸ್ಯೆಗಳನ್ನು  ಪರಿಹರಿಸಲು ನ್ಯಾಯಾಲಯಗಳ ಅವಶ್ಯಕತೆಯಿದೆ ಎಂದು ಹೇಳಿದೆ.

ಅಲ್ಲದೆ ಈ ಪ್ರಕರಣದಲ್ಲಿ ಇತರೆ ಇಬ್ಬರು ಆರೋಪಿಗಳಾದ ನೀತೀಶ್ ಸರ್ದಾ ಮತ್ತು ಫಿರೋಜ್ ಮೊಹಮ್ಮದ್ ಶೇಖ್ ಅವರಿಗೆ ತಲಾ 50,000 ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಉನ್ನತ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿತ್ತು ಮತ್ತು ಅವರು ಸಾಕ್ಷ್ಯಗಳನ್ನು ಹಾಳು ಮಾಡಬಾರದು  ಮತ್ತು ತನಿಖೆಗೆ ಸಹಕರಿಸಬೇಕು ಎಂದು ನಿರ್ದೇಶನ ನೀಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ.11ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ವೈಯಕ್ತಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದರೆ ಅದು 'ನ್ಯಾಯದ ವಿಡಂಬನೆ' ಆಗುತ್ತದೆ ಎಂದು ಹೇಳಿ ಅರ್ನಬ್‌ ಗೋಸ್ವಾಮಿಗೆ ಮಧ್ಯಂತರ ಜಾಮೀನು ನೀಡಿತ್ತು.

ವಾಸ್ತುಶಿಲ್ಪಿ-ಒಳಾಂಗಣ ವಿನ್ಯಾಸಕ ಅನ್ವಯ್ ನಾಯಕ್ ಮತ್ತು ಅವರ ತಾಯಿ 2018 ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಬ್ ಮತ್ತು ಇತರರನ್ನು ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ ನವೆಂಬರ್ 4 ರಂದು ಅಲಿಬಾಗ್ ಪೊಲೀಸರು ಬಂಧಿಸಿದ್ದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com