ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

2020ರಲ್ಲಿ ಕರ್ನಾಟಕದಲ್ಲಿ 8, ಮಧ್ಯ ಪ್ರದೇಶದಲ್ಲಿ 26 ಹುಲಿಗಳ ಸಾವು; ಸಾವಿಗಿಂತ ಜನನ ಪ್ರಮಾಣ ಹೆಚ್ಚಿದೆ ಎಂದ ಸರ್ಕಾರ

2020 ಅಂದರೆ ಪ್ರಸಕ್ತ ವರ್ಷದಲ್ಲಿ ಕರ್ನಾಟಕದಲ್ಲಿ 8 ಮತ್ತು ಮಧ್ಯ ಪ್ರದೇಶದಲ್ಲಿ 26 ಹುಲಿಗಳ ಸಾವ ಸಂಭವಿಸಿದೆ ಎಂದು ಅಂಕಿಅಂಶಗಳ ಮೂಲಕ ತಿಳಿದುಬಂದಿದೆ.
Published on

ನವದೆಹಲಿ: 2020 ಅಂದರೆ ಪ್ರಸಕ್ತ ವರ್ಷದಲ್ಲಿ ಕರ್ನಾಟಕದಲ್ಲಿ 8 ಮತ್ತು ಮಧ್ಯ ಪ್ರದೇಶದಲ್ಲಿ 26 ಹುಲಿಗಳ ಸಾವ ಸಂಭವಿಸಿದೆ ಎಂದು ಅಂಕಿಅಂಶಗಳ ಮೂಲಕ ತಿಳಿದುಬಂದಿದೆ.

ಹೌದು.. ಹುಲಿಗಳ ಸಂಖ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ರಸಕ್ತ ವರ್ಷ ರಾಜ್ಯದಲ್ಲಿ 8 ಹುಲಿಗಳು ಮೃತಪಟ್ಟಿದ್ದು, ಈ ಪೈಕಿ ಎರಡು ಹುಲಿಗಳು ಬೇಟೆಗಾರರ ದಾಳಿಗೆ ಬಲಿಯಾಗಿವೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ರಾಜ್ಯದಲ್ಲಿ 12 ಹುಲಿಗಳು  ಮೃತಪಟ್ಟಿದ್ದವು ಎಂದು ಹೇಳಲಾಗಿದೆ.

ಮಧ್ಯಪ್ರದೇಶದಲ್ಲಿ 26 ಹುಲಿಗಳ ಸಾವು
ಕರ್ನಾಟಕದಂತೆಯೇ ಮಧ್ಯ ಪ್ರದೇಶದಲ್ಲೂ ಈ  ವರ್ಷ ಹುಲಿಗಳ ಸಾವಿನ ಸಂಖ್ಯೆ ಏರಿಕೆಯಾಗಿದ್ದು, ಪ್ರಸಕ್ತ ವರ್ಷ ಇಲ್ಲಿ 26 ಹುಲಿಗಳು ಸಾವನ್ನಪ್ಪಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹೇಳಿದೆ. ಸಾವನ್ನಪ್ಪಿದ ವ್ಯಾಘ್ರಗಳ ಕುರಿತ ಮಾಹಿತಿಯನ್ನು ಪ್ರಾಧಿಕಾರದ ಜಾಲತಾಣದಲ್ಲಿ  ಪ್ರಕಟಿಸಲಾಗಿದ್ದು, ಸಾವನ್ನಪ್ಪಿದ ಪೈಕಿ, ವಿವಿಧ ಸಂರಕ್ಷಿತ ಅರಣ್ಯದಲ್ಲಿನ 21 ಹುಲಿಗಳು ಸಾವನ್ನಪ್ಪಿದ್ದರೆ, ಬಾಂಧವಗಡ ಹುಲಿ ಸಂರಕ್ಷಿತಾರಣ್ಯದಲ್ಲಿ ಗರಿಷ್ಠ 10 ಹುಲಿಗಳು ಮೃತಪಟ್ಟಿವೆ ಎಂದು ಪ್ರಾಧಿಕಾರ ಪ್ರಕಟಿಸಿದೆ.

ಕಳೆದ ವರ್ಷ ಅಂದರೆ 2019ರಲ್ಲಿ 28 ಹುಲಿಗಳು ಮೃತಪಟ್ಟಿದ್ದವು. ಈ ಪೈಕಿ, ಮೂರು ಹುಲಿಗಳು ಬೇಟೆಗಾರರಿಗೆ ಬಲಿಯಾಗಿದ್ದವು ಎಂದೂ ಮಾಹಿತಿ ನೀಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮಧ್ಯಪ್ರದೇಶ ಅರಣ್ಯ ಸಚಿವ ವಿಜಯ್ ಶಾ, 'ಸದ್ಯ ರಾಜ್ಯದಲ್ಲಿ 124 ಹುಲಿ ಮರಿಗಳಿವೆ. 2018ರಲ್ಲಿ ನಡೆದ ಗಣತಿ ವೇಳೆ ಮರಿಗಳ ಸಂಖ್ಯೆ ಎಷ್ಟಿತ್ತು ಎಂಬುದನ್ನು ದಾಖಲಿಸಿಲ್ಲ. ಮುಂದಿನ ಗಣತಿ ವೇಳೆಗೆ ರಾಜ್ಯದಲ್ಲಿ ಹುಲಿಗಳ ಸಂಖ್ಯೆ 600ಕ್ಕೂ ಅಧಿಕ ಇರಲಿದೆ.  ಕಳೆದ ಆರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಹುಲಿಗಳ ಮರಣ ಪ್ರಮಾಣ ಅವುಗಳ ಜನನ ಪ್ರಮಾಣಕ್ಕಿಂತ ಕಡಿಮೆ ಇತ್ತು. ರಾಜ್ಯದಲ್ಲಿ ಹುಲಿಗಳ ಸಂಖ್ಯೆಗೆ ಅನುಗುಣವಾಗಿ ಅವುಗಳ ಸಂರಕ್ಷಣೆಗಾಗಿ ಅರಣ್ಯ ಪ್ರದೇಶ ಇಲ್ಲ. ಉದಾಹರಣೆಗೆ, ಬಾಂಧವಗಡ ಹುಲಿ ಸಂರಕ್ಷಿತಾರಣ್ಯದಲ್ಲಿ ಸದ್ಯ 125  ಹುಲಿಗಳಿವೆ. ಆದರೆ, ಈ ಸಂರಕ್ಷಿತಾರಣ್ಯ 90 ವ್ಯಾಘ್ರಗಳ ವಾಸಕ್ಕೆ ಮಾತ್ರ ಯೋಗ್ಯವಿದೆ ಎಂದೂ ವಿವರಿಸಿದರು.

ಇದೇ ವಿಚಾರವಾಗಿ ಮಾತನಾಡಿರುವ ವನ್ಯಜೀವಿ ಸಂರಕ್ಷಣೆಗಾಗಿ ಹೋರಾಡುತ್ತಿರುವ ಅಜಯ್ ದುಬೆ, 'ಹುಲಿಗಳ ಸಂರಕ್ಷಣೆಗಾಗಿ ಮಧ್ಯಪ್ರದೇಶದಲ್ಲಿ ವಿಶೇಷ ಕಾರ್ಯಪಡೆ ಇಲ್ಲ. ಕರ್ನಾಟಕದಲ್ಲಿ ಇಂಥ ಕಾರ್ಯಪಡೆ ಇರುವುದರಿಂದ ಅಲ್ಲಿ ಹುಲಿಗಳ ಸಂರಕ್ಷಣೆ ಪರಿಣಾಮಕಾರಿಯಾಗಿದೆ.  ರಾಜ್ಯದಲ್ಲಿಯೂ ವಿಶೇಷ ಕಾರ್ಯಪಡೆ ರಚಿಸಲು ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದೂ ದುಬೆ ಹೇಳಿದ್ದಾರೆ,
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com