ಕರೆನ್ಸಿ ನೋಟುಗಳ ಮೂಲಕ ಹರಡತ್ತಿದೆಯೇ ಕೊರೋನಾ ವೈರಸ್: CAIT ಆಘಾತಕಾರಿ ಮಾಹಿತಿ; ಆರ್ ಬಿಐ ಹೇಳಿದ್ದೇನು?

ಭಾರತದಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರ ಮುಂದುವರೆದಿರುವಂತೆಯೇ ದೇಶದಲ್ಲಿ ಕರೆನ್ಸಿ ನೋಟುಗಳ ಮುಖಾಂತರವೂ ಸೋಂಕು ಹರಡುತ್ತಿದೆಯೇ ಎಂಬ ಅನುಮಾನ ಭಾರಿ ಸುದ್ದಿಗೆ ಗ್ರಾಸವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಭಾರತದಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರ ಮುಂದುವರೆದಿರುವಂತೆಯೇ ದೇಶದಲ್ಲಿ ಕರೆನ್ಸಿ ನೋಟುಗಳ ಮುಖಾಂತರವೂ ಸೋಂಕು ಹರಡುತ್ತಿದೆಯೇ ಎಂಬ ಅನುಮಾನ ಭಾರಿ ಸುದ್ದಿಗೆ ಗ್ರಾಸವಾಗಿದೆ.

ಹೌದು.. ಈ ಕುರಿತಂತೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ಮಾಹಿತಿ ನೀಡಿದ್ದು, ಕರೆನ್ಸಿ ನೋಟುಗಳ ಮೂಲಕವು ಕೊರೋನಾ ಸೋಂಕು ಹರಡಬಹುದಾದ ಸಾಧ್ಯತೆ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸುಳಿವು ನೀಡಿದೆ ಎಂದು ಹೇಳಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿಯಂತೆ ಕರೆನ್ಸಿ ನೋಟುಗಳ ಮೂಲಕವು ಕೊರೊನಾ ವೈರಸ್ ಸೇರಿದಂತೆ ಸೋಂಕು, ಬ್ಯಾಕ್ಟೀರಿಯಾ ಹರಡಬಹುದಾದ ಸಾಧ್ಯತೆ ಇದೆ. ನೋಟುಗಳು ಕೊರೊನಾ ವೈರಸ್ ಹರಡುವ ಸಂಭಾವ್ಯ ವಾಹಕಗಳಾಗಿವೆ. ಹಾಗಾಗಿ ಡಿಜಿಟಲ್ ಪಾವತಿಗೆ ಪ್ರೋತ್ಸಾಹ  ನೀಡಲಾಗುತ್ತಿದೆ ಎಂದು ಹೇಳಲಾಗಿದೆ. 

ಸಿಎಐಟಿ ವತಿಯಿಂದ ಮಾರ್ಚ್ 9, 2020 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಕರೆನ್ಸಿ ನೋಟುಗಳು ಬ್ಯಾಕ್ಟೀರಿಯಾ ಮತ್ತು ವೈರಸ್ ಗಳ ವಾಹಕಗಳಾಗಿವೆಯೇ.? ಅಥವಾ ಇಲ್ಲವೇ..? ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಕೇಳಲಾಗಿತ್ತು. ಹಣಕಾಸು ಸಚಿವಾಲಯ ಈ  ಪತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗೆ ರವಾನಿಸಿದ್ದು ಆರ್.ಬಿ.ಐ.ನಿಂದ ಸಿಎಐಟಿಗೆ ಉತ್ತರ ನೀಡಲಾಗಿದೆ. ಕರೆನ್ಸಿ ನೋಟುಗಳು ಕೊರೊನಾ ವೈರಸ್ ಸೇರಿದಂತೆ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳ ವಾಹಕಗಳಾಗಿರಬಹುದು. ಇದನ್ನು ತಪ್ಪಿಸುವ ಉದ್ದೇಶದಿಂದ ಡಿಜಿಟಲ್ ಪಾವತಿಯನ್ನು ಹೆಚ್ಚು ಬಳಕೆ  ಮಾಡಬೇಕೆಂದು ಸುಳಿವು ನೀಡಿದೆ ಎಂದು ಸಿಎಐಟಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ. ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ ವಾಲ್ ಅವರು, ಆರ್ ಬಿಐ ನೀಡಿರುವ ಉತ್ತರದಂತೆ ನೋಟುಗಳಲ್ಲಿ ಕೊರೊನಾ ವೈರಸ್ ಮತ್ತು ಬ್ಯಾಕ್ಟೀರಿಯಾ ಹರಡಬಹುದು. ಕರೆನ್ಸಿ ನೋಟುಗಳ ಬಳಕೆ ತಪ್ಪಿಸಲು ಡಿಜಿಟಲ್  ವಹಿವಾಟಿಗೆ ಸೂಚಿಸಲಾಗಿದೆ. ಇದಲ್ಲದೆ, ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ಮತ್ತು ಅಳವಡಿಸಲು ಪ್ರೋತ್ಸಾಹಕ ಯೋಜನೆಗಳನ್ನು ಪರಿಚಯಿಸುವಂತೆ ತಿಳಿಸಲಾಗಿದೆ. ಡಿಜಿಟಲ್ ವಹಿವಾಟಿಗೆ ವಿಧಿಸುವ ಬ್ಯಾಂಕ್ ಶುಲ್ಕಗಳನ್ನು ಮನ್ನಾ ಮಾಡಬೇಕು. ಬ್ಯಾಂಕ್ ಶುಲ್ಕಗಳಿಗೆ ಬದಲಾಗಿ ಸರ್ಕಾರ ನೇರವಾಗಿ  ಬ್ಯಾಂಕುಗಳಿಗೆ ಸಹಾಯ ಧನ ನೀಡಬೇಕು. ಇಂತಹ ಸಬ್ಸಿಡಿಗಳಿಂದ ಸರ್ಕಾರದ ಮೇಲೆ ಆರ್ಥಿಕ ಹೊರೆ ಆಗುವುದಿಲ್ಲ. ಇದು ಬ್ಯಾಂಕ್ ನೋಟುಗಳ ಮುದ್ರಣಕ್ಕೆ ಆಗುವ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಆರ್ ಬಿಐ ಮಾಹಿತಿ ನೀಡಿದೆ ಎಂದು ಹೇಳಲಾಗಿದೆ.

ದೇಶದಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರ ಜೋರಾಗಿದ್ದು, ಈಗಾಗಲೇ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 66 ಲಕ್ಷ ಗಡಿ ದಾಟಿದೆ. ಇದೇ ಕಾರಣಕ್ಕೆ ಸೋಂಕು ಪ್ರಸರಣದ ಮಾಧ್ಯಮಗಳ ಕುರಿತು ತಜ್ಞರು ಅಧ್ಯಯನ ನಡೆಸಿದ್ದು, ಡ್ರಾಪ್ ಲೆಟ್ಸ್ ಸೇರಿದಂತೆ ಗಾಳಿ ಕೂಡ ಸೋಂಕಿನ ಮಾಧ್ಯಮವಾಗಿದೆ  ಎಂಬುದನ್ನು ತಜ್ಞರು ಮನಗಂಡಿದ್ದಾರೆ. ಇದೀಗ ಕರೆನ್ಸಿ ನೋಟುಗಳೂ ಕೂಡ ಸೋಂಕಿನ ಪ್ರಸರಣ ಮಾಧ್ಯಮವಾಗಿರುವ ಕುರಿತ ವರದಿ ಆತಂಕಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com