ನವದೆಹಲಿ: ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ ಮತ್ತು ಶಿರೋಮಣಿ ಅಕಾಲಿ ದಳದ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಕಳೆದ ತಿಂಗಳು ರಾಜೀನಾಮೆ ನೀಡಿದ್ದರಿಂದ ಈಗ 51 ಸದಸ್ಯ ಬಲದ ಕೇಂದ್ರ ಸಚಿವ ಸಂಪುಟದಲ್ಲಿ ಒಂದು ಸ್ಥಾನ ಹೊರತುಪಡಿಸಿ ಉಳಿದೆಲ್ಲಾ ಸ್ಥಾನಗಳು ಬಿಜೆಪಿ ಪಾಲಾಗಿವೆ.
ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ರಾಮ್ ದಾಸ್ ಅಠವಳೆ ಅವರು ಸಚಿವ ಸಂಪುಟದಲ್ಲಿರುವ ಏಕೈಕ ಬಿಜೆಪಿಯೇತರ ಸದಸ್ಯರಾಗಿದ್ದಾರೆ. ಅಠವಳೆ ಅವರು ಪ್ರಸ್ತುತ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾಗಿದ್ದಾರೆ.
1977 ರ ನಂತರ ಇದೇ ಮೊದಲ ಬಾರಿಗೆ ಕೇಂದ್ರದಲ್ಲಿನ ಸಮ್ಮಿಶ್ರ ಸರ್ಕಾರದಲ್ಲಿ ಒಂದು ಸ್ಥಾನ ಹೊರತುಪಡಿಸಿ ಉಳಿದೆಲ್ಲಾ ಸ್ಥಾನಗಳು ಒಂದೇ ಪಕ್ಷದವರ ಪಾಲಾಗಿದೆ.
2019ರ ಲೋಕಸಭಾ ಚುನಾವಣೆಯ ನಂತರ ರಚನೆಯಾದ ಮೋದಿ ಸರ್ಕಾರ 2.0ನಲ್ಲಿ ಶಿವಸೇನೆಯ ಅರವಿಂದ ಸಾವಂತ್, ಶಿರೋಮಣಿ ಅಕಾಲಿ ದಳದ ಹರ್‌ಸಿಮ್ರತ್ ಕೌರ್ ಬಾದಲ್, ಎಲ್‌ಜೆಪಿಯ ರಾಮ್ ವಿಲಾಸ್ ಪಾಸ್ವಾನ್ ಕೇಂದ್ರ ಸಚಿವ ಸಂಪುಟದಲ್ಲಿ ಬಿಜೆಪಿ ಮಿತ್ರ ಪಕ್ಷಗಳ ಪ್ರತಿನಿಧಿಗಳಾಗಿದ್ದರು.
ಶಿವಸೇನೆ 2019ರ ಕೊನೆಯಲ್ಲಿ ಎನ್‌ಡಿಎಯನ್ನು ತೊರೆದರೆ, ಅಖಾಲಿದಳ ಇತ್ತೀಚೆಗೆ ಕೃಷಿ ಮಸೂದೆಗಳ ಮೇಲಿನ ಭಿನ್ನಮತದ ಹಿನ್ನೆಲೆಯಲ್ಲಿ ಮೈತ್ರಿ ಮುರಿಯಿತು. ಮತ್ತೊಂದು ಪ್ರಮುಖ ಎನ್‌ಡಿಎ ಮಿತ್ರ ಪಕ್ಷ ಜೆಡಿಯು ಸರ್ಕಾರದಲ್ಲಿ ಪಾಲ್ಗೊಳ್ಳದೆ ದೂರವೇ ಉಳಿದಿದೆ.
ಪ್ರಧಾನಿ ಮೋದಿಯವರಲ್ಲದೆ, 24 ಕ್ಯಾಬಿನೆಟ್ ಸಚಿವರು, ಒಂಬತ್ತು ರಾಜ್ಯ ಸಚಿವರು (ಸ್ವತಂತ್ರ ಖಾತೆ) ಮತ್ತು 24 ರಾಜ್ಯ ಸಚಿವರು ಸೇರಿ ಒಟ್ಟು 57 ಮಂತ್ರಿಗಳು 2019ರ ಮೇ 30 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.
ಸಾವಂತ್, ಹರ್ಸಿಮ್ರತ್ ಕೌರ್ ರಾಜೀನಾಮೆ ಮತ್ತು ಪಾಸ್ವಾನ್ ಸಾವಿನ ನಂತರ ಕ್ಯಾಬಿನೆಟ್‌ನಲ್ಲಿ ಈಗ 21 ಮಂತ್ರಿಗಳಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಸಾವಿನೊಂದಿಗೆ, ರಾಜ್ಯ ಸಚಿವರ ಸಂಖ್ಯೆಯೂ 23ಕ್ಕೆ ಇಳಿದಿದೆ.
ನಿಯಮಗಳ ಪ್ರಕಾರ, ಲೋಕಸಭೆಯಲ್ಲಿನ ಒಟ್ಟು ಸದಸ್ಯರ ಸಂಖ್ಯೆಯಲ್ಲಿ ಪ್ರಧಾನಿ ಸೇರಿದಂತೆ ಒಟ್ಟು ಕೇಂದ್ರ ಸಚಿವರ ಸಂಖ್ಯೆ ಶೇಕಡಾ 15 ಮೀರಬಾರದು. 543 ಸದಸ್ಯರ ಲೋಕಸಭೆಯಲ್ಲಿ 80 ಮಂತ್ರಿಗಳನ್ನು ಹೊಂದಲು ಪ್ರಧಾನಮಂತ್ರಿಗಳಿಗೆ ಅವಕಾಶವಿದೆ.
Advertisement