ಬ್ರೆಜಿಲ್: ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಪ್ರಯೋಗದ ವೇಳೆ ಸ್ವಯಂ ಸೇವಕ ಸಾವು
ರಿಯೊ ಡಿ ಜನೈರೊ: ಕೋವಿಡ್ ಸೋಂಕಿಗೆ ಲಸಿಕೆ ತಯಾರಿಸುತ್ತಿರುವ ಅಗ್ರ ಸಂಸ್ಥೆಗಳಲ್ಲಿ ಒಂದಾಗಿರುವ ಬ್ರೆಜಿಲ್ ನ ಅಸ್ಟ್ರಾಜೆನೆಕಾ ಸಂಸ್ಥೆಯ ಲಸಿಕೆ ಪ್ರಯೋಗದಲ್ಲಿ ಭಾಗಿಯಾಗಿದ್ದ ಸ್ವಯಂ ಸೇವಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದ್ದು, ಬ್ರೆಜಿಲ್ ಮೂಲದ ಔಷಧ ತಯಾರಕಾ ಸಂಸ್ಥೆ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದ ಕೋವಿಡ್-19 ಲಸಿಕೆಯ ಕ್ಲಿನಿಕಲ್ ಪ್ರಯೋಗದಲ್ಲಿ ಸ್ವಯಂ ಸೇವಕರೊಬ್ಬರು ಮೃತಪಟ್ಟಿದ್ದಾರೆ ಎಂದು ಬ್ರೆಜಿಲ್‌ನ ಆರೋಗ್ಯ ಪ್ರಾಧಿಕಾರ ‘ಅನ್ವಿಸಾ (ನ್ಯಾಷನಲ್ ಸ್ಯಾನಿಟರಿ ಸರ್ವೈಲೆನ್ಸ್ ಏಜೆನ್ಸಿ) ಬುಧವಾರ ತಿಳಿಸಿದೆ. ಅಲ್ಲದೆ, ಪ್ರಕರಣದ ತನಿಖೆಯ ಮಾಹಿತಿಯನ್ನು ಅದು ಪಡೆದುಕೊಂಡಿರುವುದಾಗಿ ಹೇಳಿದೆ ಎಂದು ವರದಿಯಲ್ಲಿ ತಿಳಿಸಿದೆ.
ವರದಿಯಲ್ಲಿರುವಂತೆ ಕ್ಲಿನಿಕಲ್ ಟ್ರಯಲ್ ವೇಳೆ ಸಂಭವಿಸಿದ ಸಾವಿನ ಘಟನೆ ನಂತರವೂ ಲಸಿಕೆಯ ಪರೀಕ್ಷೆ ಮುಂದುವರಿಯುತ್ತಿರುವುದಾಗಿ ಪ್ರಾಧಿಕಾರ ತಿಳಿಸಿದೆ. ಟ್ರಯಲ್‌ನಲ್ಲಿ ಭಾಗವಹಿಸಿರುವ ಸ್ವಯಂಸೇವಕರ ಗೌಪ್ಯತೆ ಕಾಪಾಡಿರುವ ಪ್ರಾಧಿಕಾರ ಯಾರ ಮಾಹಿತಿಯನ್ನೂ ಈ ವರೆಗೂ ಹಂಚಿಕೊಂಡಿಲ್ಲ.
ಬ್ರೆಜಿಲ್‌ನಲ್ಲಿ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಟ್ರಯಲ್‌ಗೆ ನೆರವಾಗಿರುವ ಸಾವೊ ಪಾಲೊನ ಫೆಡರಲ್ ವಿಶ್ವವಿದ್ಯಾಲಯ ಸಾವಿನ ಕುರಿತು ಪ್ರತಿಕ್ರಿಯಿಸಿದ್ದು, ‘ಸ್ವಯಂಸೇವಕ ಬ್ರೆಜಿಲ್‌ನವರೇ. ಆದರೆ, ಆ ವ್ಯಕ್ತಿ ಎಲ್ಲಿಯವರು ಎಂದು ಹೇಳಲಾಗದು, ಅವರ ಮಾಹಿತಿ ಗೌಪ್ಯವಾಗಿಡಲಾಗುತ್ತದೆ ಎಂದಿದೆ.
ಇದೇ ವಿಚಾರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಆಕ್ಸ್ ಫರ್ಡ್ ವಿವಿ, ಸ್ವಯಂಸೇವಕರು ನಿಯಂತ್ರಣ ಗುಂಪಿನಲ್ಲಿರಲಿ ಅಥವಾ ಕೋವಿಡ್-19 ಲಸಿಕೆ ಗುಂಪಿನಲ್ಲಿರಲಿ, ಎಲ್ಲಾ ಮಹತ್ವದ ವೈದ್ಯಕೀಯ ಘಟನೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗುತ್ತದೆ. ಬ್ರೆಜಿಲ್ ನಲ್ಲಿ ಈ ಪ್ರಕರಣವನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿದ ನಂತರ, ಕ್ಲಿನಿಕಲ್ ಪ್ರಯೋಗದ ಸುರಕ್ಷತೆಯ ಬಗ್ಗೆ ಯಾವುದೇ ರೀತಿ ಆತಂಕ ಅಥವಾ ಭಯಪಡುವ ಅಗತ್ಯವಿಲ್ಲ. ಅಂತೆಯೇ ಹೆಚ್ಚುವರಿಯಾಗಿ ಸ್ವತಂತ್ರ ವಿಮರ್ಶೆಯ ವಿಚಾರಣೆಯನ್ನು ಮುಂದುವರಿಸಬೇಕೆಂದು ಶಿಫಾರಸು ಮಾಡಿದೆ. ಇ
ಇನ್ನು ಅಸ್ಟ್ರಾಜೆನೆಕಾ ಪ್ರಯೋಗದಲ್ಲಿ ಶೇ.1.7ರಷ್ಟು ಪ್ರತಿಕೂಲ ಮತ್ತು ಸಾವು ಸಂಭವಿಸಿದ ಪ್ರಕರಣಗಳು ಕಂಡು ಬಂದಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬ್ರಿಟನ್‌ನ ಈ ಲಸಿಕೆಯನ್ನು ಖರೀದಿಸಿ, ರಿಯೊ ಡಿ ಜನೈರೊದಲ್ಲಿನ ತನ್ನ ಸಂಶೋಧನಾ ಕೇಂದ್ರ ‘ಫಿಯೋಕ್ರೂಜ್’ನಲ್ಲಿ ಉತ್ಪಾದಿಸುವ ಯೋಜನೆಯನ್ನು ಬ್ರೆಜಿಲ್ ಸರ್ಕಾರವು ಈಗಾಗಲೇ ಹೊಂದಿದೆ. ಇನ್ನೊಂದೆಡೆ, ಚೀನಾದ ಸಿನೋವಾಕ್ ಲಸಿಕೆಯನ್ನು ಸಾವೊ ಪಾಲೊದ ಸಂಶೋಧನಾ ಕೇಂದ್ರ ’ಬುಟಾಂಟನ್’ನಲ್ಲಿ ಪರೀಕ್ಷಿಸಲಾಗುತ್ತಿದೆ. ಕೊರೊನಾ ವೈರಸ್‌ನಿಂದಾಗಿ ಹೆಚ್ಚುಜನ ಮೃತಪಟ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಇಲ್ಲಿ 1,55,459 ಮಂದಿ ಈ ವರೆಗೆ ಸಾಂಕ್ರಾಮಿಕ ರೋಗಕ್ಕೆ ಪ್ರಾಣ ತೆತ್ತಿದ್ದಾರೆ. ಸದ್ಯ ಬ್ರೆಜಿಲ್‌ನಲ್ಲಿ 53,00,649 ಸೋಂಕು ಪ್ರಕರಣಗಳು ವರದಿಯಾಗಿದೆ. 47,56,489 ಮಂದಿ ಗುಣಮುಖರಾಗಿದ್ದಾರೆ ಎಂದು ಕೋವಿಡ್ ಟ್ರ್ಯಾಕರ್ ವೆಬ್‌ಸೈಟ್ ವರ್ಲ್ಡೋಮೀಟರ್‌ನಲ್ಲಿ ಉಲ್ಲೇಖಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ