'ಚೀನಾ, ಕೋವಿಡ್-19': ಭಾರತ-ಅಮೆರಿಕ 2+2 ಮಾತುಕತೆಯ ಅಜೆಂಡಾ
ನವದೆಹಲಿ: ಭಾರತ-ಅಮೆರಿಕ ನಡುವಿನ 2+2 ಮಾತುಕತೆಗೆ ವೇದಿಕೆ ಸಿದ್ಧವಾಗಿದ್ದು, ಅಮೆರಿಕಾದ ಸಚಿವರಾದ ಮೈಕ್ ಪೋಂಪಿಯೋ ಹಾಗೂ ಮಾರ್ಕ್ ಎಸ್ಪರ್ ಭಾರತ ಭೇಟಿಗೆ ಪ್ರಯಾಣ ಬೆಳೆಸಿದ್ದಾರೆ.
ಚೀನಾದ ಅತಿಕ್ರಮಣ ಹಾಗೂ ಕೋವಿಡ್-19 ಗೆ ಪರಿಹಾರ ಕಂಡುಕೊಳ್ಳುವುದರ ಬಗ್ಗೆ 2+2 ಸಭೆಯಲ್ಲಿ ಮಹತ್ವದ ಚರ್ಚೆ ನಡೆಯುವ ನಿರೀಕ್ಷೆಗಳಿವೆ.
ನವೆಂಬರ್ 3 ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇದಕ್ಕೂ ಕೆಲವೇ ದಿನಗಳ ಮುನ್ನ 2+2 ಮಾತುಕತೆ ನಡೆಯುತ್ತಿದೆ. ಡೊನಾಲ್ಡ್ ಟ್ರಂಪ್ ಅವರ ಆಡಳಿತ ಭಾರತದೊಂದಿಗಿನ ಸಭೆಯಲ್ಲಿ ಚೀನಾ ನಿಗ್ರಹದ ಸಂದೇಶವನ್ನು ಸ್ಪಷ್ಟವಾಗಿ ನೀಡುವ ಸಾಧ್ಯತೆ ಇದೆ.
ಮೈಕ್ ಪೊಂಪಿಯೋ ಹಾಗೂ ಎಸ್ಪರ್ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಅ.27 ರಂದು ನಡೆಯಲಿರುವ 2+2 ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಅಮೆರಿಕ ಚೀನಾ ವಿರುದ್ಧ ಕೆಂಡಾಮಂಡಲವಾಗಿದ್ದು, ಭಾರತದ ಗಡಿ ಪ್ರದೇಶದಲ್ಲಿ ಚೀನಾ ನಡೆಸುತ್ತಿರುವ ಅತಿಕ್ರಮಣದ ಬಗ್ಗೆಯೂ ಅಮೆರಿಕ ಚೀನಾದ ವಿರುದ್ಧ ಮಾತನಾಡಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ