ನವದೆಹಲಿ: ನೌಕಾಪಡೆಯಲ್ಲೂ ಸಹ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ಸ್ಥಾಪಿಸಲು ಸುಪ್ರೀಂ ಕೋರ್ಟ್ ಡಿಸೆಂಬರ್ 31ರ ವರೆಗೆ ಕಾಲಾವಕಾಶ ನೀಡಿದೆ.
ಕಳೆದ ಮಾರ್ಚ್ 17ರಂದು, ಪುರುಷ ಮತ್ತು ಮಹಿಳಾ ಅಧಿಕಾರಿಗಳ ಮಧ್ಯೆ ಲಿಂಗ ತಾರತಮ್ಯ ತೋರದೆ ಸಮಾನವಾಗಿ ಕಾಣಬೇಕು ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ಮೂರು ತಿಂಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ಸ್ಥಾಪಿಸಬೇಕು ಎಂದು ಹೇಳಿತ್ತು. ಇದೀಗ ಆ ಗಡುವನ್ನು ಡಿಸೆಂಬರ್ 31ಕ್ಕೆ ವಿಸ್ತರಿಸಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಶಾಶ್ವತ ಆಯೋಗ ಸ್ಥಾಪಿಸಲು ನೀಡಿರುವ ಗಡುವನ್ನು ಆರು ತಿಂಗಳು ವಿಸ್ತರಿಸುವಂತೆ ಕೋರಿ ಕೇಂದ್ರ ಸರ್ಕಾರ ಜೂನ್‌ನಲ್ಲಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಶಾಶ್ವತ ಆಯೋಗ ಸ್ಥಾಪಿಸಲು ನೀಡಲಾಗಿದ್ದ ಕಾಲಾವಕಾಶವನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದೆ.
ಏನಿದು ಶಾಶ್ವತ ಆಯೋಗ: ಇಲ್ಲಿಯವರೆಗೆ ಶಾರ್ಟ್ ಸರ್ವಿಸ್ ಕಮಿಷನ್(ಎಸ್ಎಸ್ ಸಿ)ಅಡಿಯಲ್ಲಿ ಮಹಿಳಾ ಅಧಿಕಾರಿಗಳು ಸೇವೆ ಆರಂಭವಾದ ದಿನದಿಂದ 10ರಿಂದ 14 ವರ್ಷಗಳವರೆಗೆ ನೌಕಾಪಡೆಯಲ್ಲಿ ಸೇವೆ ಸಲ್ಲಿಸಬಹುದಾಗಿತ್ತು. ಆದರೆ ಶಾಶ್ವತ ಆಯೋಗ ರಚನೆಯಾದ ಬಳಿಕ ನೌಕೆಯಲ್ಲಿ ತಮ್ಮ ಸೇವಾವಧಿಯ ವರ್ಷಗಳನ್ನು ಪರಿಗಣಿಸದೆ ತಾವು ನಿವೃತ್ತಿ ಹೊಂದುವವರೆಗೂ ಸೇವೆ ಸಲ್ಲಿಸಬಹುದಾಗಿದೆ.
Advertisement