ಚೀನಾದ ಮುಂದುವರಿದ ಉದ್ಧಟತನ: ಪೂರ್ವ ಲಡಾಕ್ ಗಡಿಯಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಆಕ್ರಮಣಕ್ಕೆ ಮುಂದಾದ ಪಿಎಲ್ಎ

ಪೂರ್ವ ಲಡಾಕ್ ನಲ್ಲಿ ತನ್ನ ಸ್ಥಾನವನ್ನು ಗಡಿಯಿಂದಾಚೆಗೆ ಸ್ಥಾಪಿಸಲು ಚೀನಾ ಸೇನಾಪಡೆ ಪ್ರಯತ್ನ ನಡೆಸುತ್ತಿದ್ದು ಗಾಳಿಯಲ್ಲಿ ಗುಂಡು ಹಾರಿಸಿದೆ ಎಂದು ತಿಳಿದುಬಂದಿದೆ. 45 ವರ್ಷಗಳ ನಂತರ ಗಡಿ ವಾಸ್ತವ ರೇಖೆ ಬಳಿ ಚೀನಾ ಸೇನಾಪಡೆ ಈ ರೀತಿ ಗಾಳಿಯಲ್ಲಿ ಗುಂಡು ಹಾರಿಸಿ ಗಡಿಯನ್ನು ಆಕ್ರಮಿಸಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಶಸ್ತ್ರಾಸ್ತ್ರ, ಆಯುಧಗಳೊಂದಿಗೆ ಚೀನಾ ಸೈನಿಕರು
ಶಸ್ತ್ರಾಸ್ತ್ರ, ಆಯುಧಗಳೊಂದಿಗೆ ಚೀನಾ ಸೈನಿಕರು
Updated on

ಲೇಹ್: ಪೂರ್ವ ಲಡಾಕ್ ನಲ್ಲಿ ತನ್ನ ಸ್ಥಾನವನ್ನು ಗಡಿಯಿಂದಾಚೆಗೆ ಸ್ಥಾಪಿಸಲು ಚೀನಾ ಸೇನಾಪಡೆ ಪ್ರಯತ್ನ ನಡೆಸುತ್ತಿದ್ದು ಗಾಳಿಯಲ್ಲಿ ಗುಂಡು ಹಾರಿಸಿದೆ ಎಂದು ತಿಳಿದುಬಂದಿದೆ. 45 ವರ್ಷಗಳ ನಂತರ ಗಡಿ ವಾಸ್ತವ ರೇಖೆ ಬಳಿ ಚೀನಾ ಸೇನಾಪಡೆ ಈ ರೀತಿ ಗಾಳಿಯಲ್ಲಿ ಗುಂಡು ಹಾರಿಸಿ ಗಡಿಯನ್ನು ಆಕ್ರಮಿಸಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಮೊನ್ನೆ ಸೋಮವಾರ ರಾತ್ರಿ ಪೂರ್ವ ಲಡಾಕ್ ನ ರೆಜಂಗ್ -ಲ-ರಿಡ್ಜ್ ಲೈನ್ ನಲ್ಲಿ ಎರಡೂ ದೇಶಗಳ ಸೇನಾಪಡೆಗಳ ಮಧ್ಯೆ ಹೊಸ ಸಂಘರ್ಷ ಉಂಟಾಗಿದ್ದು, ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ ಎ)ಯ ಸೈನಿಕರು ಶಸ್ತ್ರಾಸ್ತ್ರಗಳೊಂದಿಗೆ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ಕಳೆದ ವಾರ ರಷ್ಯಾದ ಮಾಸ್ಕೊದಲ್ಲಿ ಭಾರತ ಮತ್ತು ಚೀನಾ ದೇಶದ ರಕ್ಷಣಾ ಸಚಿವರ ಮಧ್ಯೆ ಮಾತುಕತೆ ನಡೆದ ನಂತರ ಈ ಬೆಳವಣಿಗೆಯಾಗಿದೆ. ಇನ್ನು ಇದೇ ಗುರುವಾರ ಮಾಸ್ಕೊದಲ್ಲಿ ವಿದೇಶಾಂಗ ಸಚಿವರುಗಳ ಮಟ್ಟದ ಮಾತುಕತೆ ಸಹ ನಡೆಯಲಿದೆ.

ಕಳೆದ ಸೋಮವಾರ ರಾತ್ರಿ ಪಾಂಗೊಂಗ್ ಲೇಕ್ ಬಳಿ ಗಾಳಿಯಲ್ಲಿ ಗುಂಡು ಹಾರಿಸಿ ಪ್ರಕರಣದ ಬಗ್ಗೆ ಭಾರತ ಮತ್ತು ಚೀನಾ ಪರಸ್ಪರ ದೂಷಿಸಿಕೊಂಡಿವೆ. ಚೀನಾ ಗಡಿಯಿಂದ ಪ್ರಚೋದನಕಾರಿ ನಡೆಯನ್ನು ಕಂಡರೂ ಸಹ ನಮ್ಮ ಸೈನಿಕರು ಪ್ರಬುದ್ಧತೆಯಿಂದ ಜವಾಬ್ದಾರಿಯುತವಾಗಿ ವರ್ತಿಸಿ ತಡೆಯನ್ನೊಡ್ಡಿದ್ದಾರೆ.

ಮೊನ್ನೆ ಸೆಪ್ಟೆಂಬರ್ 7ರ ಪ್ರಕರಣದಲ್ಲಿ, ಗಡಿ ವಾಸ್ತವ ರೇಖೆಯ ಫಾರ್ವರ್ಡ್ ಪ್ರದೇಶದಲ್ಲಿ ಗಡಿಯೊಳಗೆ ನುಗ್ಗಿ ಬರಲು ಚೀನಾ ಸೇನೆ ಪ್ರಯತ್ನಪಟ್ಟಿತು. ಅದನ್ನು ನಮ್ಮ ಸೈನಿಕರು ಯಶಸ್ವಿಯಾಗಿ ತಡೆದರು. ಆಗ ಚೀನಾದ ಸೈನಿಕರು ಗಾಳಿಯಲ್ಲಿ ಕೆಲ ಸುತ್ತು ಗುಂಡು ಹಾರಿಸಿ ನಮ್ಮ ಸೈನಿಕರನ್ನು ಪ್ರಚೋದಿಸಲು, ಬೆದರಿಕೆಯೊಡ್ಡಲು ಯತ್ನಿಸಿದ್ದಾರೆ ಎಂದು ಭಾರತೀಯ ಸೇನೆ ಹೇಳಿಕೆ ಮೂಲಕ ತಿಳಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡ ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದೆ. ಈ ಹಿಂದೆ 1975ರಲ್ಲಿ ಚೀನಾದ ಸೇನೆ ವಾಸ್ತವ ರೇಖೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿತ್ತು. ನಂತರ 1996ರಲ್ಲಿ ಮತ್ತು 2005ರಲ್ಲಿ ಮಾಡಿಕೊಂಡಿರುವ ಒಪ್ಪಂದ ಪ್ರಕಾರ ಭಾರತ ಮತ್ತು ಚೀನಾ ಸೈನಿಕರು ಗಡಿ ವಾಸ್ತವ ರೇಖೆಯಲ್ಲಿ ಯಾವುದೇ ಸಂಘರ್ಷ ಸಮಯದಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸುವ ಹಾಗಿಲ್ಲ.
ಮೊನ್ನೆ ಸೋಮವಾರ ರಾತ್ರಿ, ಚೀನಾದ ಸೇನೆ ಹೇಳಿಕೆ ಬಿಡುಗಡೆ ಮಾಡಿ, ಭಾರತೀಯ ಸೈನಿಕರು ಗಡಿಯನ್ನು ದಾಟಿ ಬಂದು ಪಾಂಗೊಂಗ್ ಲೇಕ್ ಬಳಿ ಗುಂಡು ಹಾರಿಸಲು ಯತ್ನಿಸಿದರು ಎಂದು ಆಪಾದಿಸಿದ ನಂತರ ಭಾರತೀಯ ಸೇನೆ ಈ ಸ್ಪಷ್ಟನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com