

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ರೈಲ್ವೆ ಹಳಿಗಳ ಬದಿಗಳಲ್ಲಿ ಇರುವ 48 ಸಾವಿರ ಕೊಳಗೇರಿ ಸಮೂಹಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ಆದೇಶ ವಿರೋಧಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಲು ಕೊಳಗೇರಿ ನಿವಾಸಿಗಳು ಸಜ್ಜಾಗಿದ್ದಾರೆ.
ಗುಡಿಸಲುಗಳನ್ನು ಧ್ವಂಸ ಮಾಡಬೇಕೆನ್ನುವ ಆದೇಶದ ವಿರುದ್ಧ ಆಕ್ರೋಶಿತಗೊಂಡಿರುವ ನಿವಾಸಿಗಳು ಇದು ಬಿಟ್ಟರೆ ನಾವೆಲ್ಲಿಗೆ ಹೋಗಬೇಕು ಎಂದು ಕೇಳಿದ್ದಾರೆ. ದೆಹಲಿಯ ಆನಂದ್ ಪರ್ಬಾತ್, ನರೈನಾ ವಿಹಾರ್, ಜಲ್ ವಿಹಾರ್ ಮತ್ತು ನಿಜಾಮುದ್ದೀನ್ ಗಳಲ್ಲಿ ರೈಲ್ವೆ ಹಳಿಗಳ ಪಕ್ಕದಲ್ಲಿರುವ ಕೊಳೆಗೇರಿಗೆ ನಿನ್ನೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಸಂಡೆ ಸ್ಟಾಂಡರ್ಡ್ ತಂಡ ಭೇಟಿ ನೀಡಿತ್ತು. ತಮಗೆ ಬದಲಿ ಸ್ಥಳವನ್ನು ಸರ್ಕಾರ ನೀಡುವವರೆಗೆ ತಾವು ಸ್ಥಳ ಬಿಟ್ಟು ಹೋಗುವುದಿಲ್ಲ ಎಂದು ನಿವಾಸಿಗಳು ಹೇಳುತ್ತಾರೆ.
ಮೊದಲು ನಮಗೆ ಬದಲಿ ಪರ್ಯಾಯ ಮನೆಗಳನ್ನು ನೀಡಿ, ನಂತರ ಇಲ್ಲಿ ನಮ್ಮ ಮನೆಗಳನ್ನು ಧ್ವಂಸ ಮಾಡಿ, ಇಲ್ಲದಿದ್ದರೆ ಈ ರೈಲು ಹಳಿಯಲ್ಲಿ ಮಲಗಿ ಪ್ರಾಣ ಬಿಡುತ್ತೇವೆ ಎಂದು ಮದರ್ಸಿ ಕಾಲೊನಿಯ ಕೊಳಗೇರಿ ನಿವಾಸಿ ಆನಂದಿ ಹೇಳುತ್ತಾರೆ.
ಪತಿ ಮತ್ತು ತನ್ನಿಬ್ಬರು ಮಕ್ಕಳೊಂದಿಗೆ ಇಲ್ಲಿ ಕೊಳಗೇರಿಯಲ್ಲಿ ವಾಸಿಸುತ್ತಿರುವ ಆನಂದಿ, ನಾನು ಇಲ್ಲೇ ಹುಟ್ಟಿ ಬೆಳೆದಿದ್ದು. ನಮಗೂ ಈ ಕಸದ ರಾಶಿ ಮಧ್ಯೆ ಬದುಕಲು ಮನಸ್ಸಿಲ್ಲ. ಆದರೆ ಈ ಕೊರೋನಾ ಸಮಯದಲ್ಲಿ ನಾವು ಎಲ್ಲಿಗೆ ಹೋಗಬೇಕು. ಸರ್ಕಾರ ನಮಗೆ ಬೇರೆ ಕಡೆ ಜಾಗ ನೀಡಿದರೆ ನಾವು ಹೋಗಲು ಸಿದ್ದವಿದ್ದೇವೆ ಎನ್ನುತ್ತಾರೆ.
ಲಜ್ ಪತ್ ನಗರದ ಮತ್ತೊಬ್ಬ ಕೊಳಗೇರಿ ನಿವಾಸಿ ಸೀಮಾ, ಕಾಂಗ್ರೆಸ್ ಸರ್ಕಾರವಿದ್ದಾಗ ಇಲ್ಲಿ ಗುಡಿಸಲುಗಳನ್ನು ಧ್ವಂಸ ಮಾಡಲಾಗಿತ್ತು. ಇಲ್ಲಿನ ಜನರನ್ನು ಜಂಗ್ ಪುರ, ತ್ರಿಲೋಕ್ ಪುರಿಗೆ ವರ್ಗಾಯಿಸಲಾಯಿತು, ನಮಗೆ ಸರ್ಕಾರ ಊಟ, ವಸತಿ ಕೊಡುತ್ತದೆ ಎಂದು ಆಶ್ವಾಸನೆ ನೀಡುತ್ತದೆ. ಆದರೆ ಯಾವುದೇ ಈಡೇರಿಲ್ಲ. ಇನ್ನು ಮೂರು ತಿಂಗಳಲ್ಲಿ ಚಳಿಗಾಲ ಬರುತ್ತದೆ, ಸಣ್ಣ ಮಕ್ಕಳನ್ನು ಕರೆದುಕೊಂಡು ನಾವೆಲ್ಲಿಗೆ ಹೋಗಬೇಕು ಎಂದು ಕೇಳುತ್ತಾರೆ.
ದೆಹಲಿ ಕೊಳಚೆ ಪ್ರದೇಶಗಳ ನಿವಾಸಿಗಳ ಪುನರ್ವಸತಿ ನೀತಿಯಡಿ ನಿವಾಸಿಗಳಿಗೆ ಸರಿಯಾದ ವಸತಿ ವ್ಯವಸ್ಥೆ ಮಾಡಿಕೊಡುವವರೆಗೆ ಗುಡಿಸಲುಗಳನ್ನು ಧ್ವಂಸ ಮಾಡಬೇಡಿ ಎಂದು ದೆಹಲಿ ಸರ್ಕಾರ ಕೂಡ ರೈಲ್ವೆ ಇಲಾಖೆಯನ್ನು ಕೇಳಿಕೊಂಡಿದೆ.
ಇಲ್ಲಿನ ಕೊಳಗೇರಿಯಲ್ಲಿ ಇರುವವರಲ್ಲಿ ಬಹುತೇಕರು ತಮಿಳು ನಾಡು ಮೂಲದವರು. ತಮಿಳು ನಾಡಿನ ಒಂದೂವರೆ ಲಕ್ಷಕ್ಕೂ ಅಧಿಕ ವಲಸೆ ಕೂಲಿ ಕಾರ್ಮಿಕರು ಇಲ್ಲಿ ನೆಲೆಸಿದ್ದಾರೆ.
Advertisement