ದೆಹಲಿ ವಿಧಾನಸಭೆಗೂ ತಟ್ಟಿದ ಕೊರೋನಾ ಬಿಸಿ: ದೆಹಲಿ ಉಪ ಮುಖ್ಯಮಂತ್ರಿ ಸೇರಿದಂತೆ ಹಲವು ಶಾಸಕರಿಗೆ ಕೊರೋನಾ ಸೋಂಕು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾರಕ ಕೊರೋನಾ ವೈರಸ್ ಸೋಂಕು ಆರ್ಭಟ ಮುಂದುವರೆದಿದ್ದು, ಇದೀಗ ದೆಹಲಿ ವಿಧಾನಸಭೆಗೂ ಸೋಂಕಿನ ಭೀತಿ ಒಕ್ಕರಿಸಿದ್ದು, ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳದೇ ವಾಪಸ್ ಆಗಿರುವ ಘಟನೆ ನಡೆದಿದೆ.
ದೆಹಲಿ ವಿಧಾನಸಭೆ
ದೆಹಲಿ ವಿಧಾನಸಭೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾರಕ ಕೊರೋನಾ ವೈರಸ್ ಸೋಂಕು ಆರ್ಭಟ ಮುಂದುವರೆದಿದ್ದು, ಇದೀಗ ದೆಹಲಿ ವಿಧಾನಸಭೆಗೂ ಸೋಂಕಿನ ಭೀತಿ ಒಕ್ಕರಿಸಿದ್ದು, ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳದೇ ವಾಪಸ್ ಆಗಿರುವ ಘಟನೆ ನಡೆದಿದೆ.

ಹೌದು.. ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯೋ, ಆರ್ ಕೆಪುರಂ ಶಾಸಕರಾದ ಪರ್ಮಿಳಾ ಟೋಕಾ ಅವರಿಗೆ ಸೊಂಕು ಒಕ್ಕರಿಸಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಮನೀಶ್ ಸಿಸೋಡಿಯಾ ಅವರು, ಅಲ್ಪ ಪ್ರಮಾಣದ ಜ್ವರ ಇದ್ದಿದ್ದರಿಂದ ನಾನು ಕೊವಿಡ್ ಪರೀಕ್ಷೆಗೊಳಪಟ್ಟಿದ್ದೆ.  ವರದಿ ಪಾಸಿಟಿವ್ ಬಂದಿದ್ದು, ನಾನು ಮನೆಯಲ್ಲೇ ಸೆಲ್ಫ್ ಐಸೋಲೇಷನ್ ನಲ್ಲಿದ್ದೇನೆ. ಪ್ರಸ್ತುತ ನನಗೆ ಜ್ವರ ಅಥವಾ ಇತರೆ ಸಮಸ್ಯೆಗಳಿಲ್ಲ. ಸಂಪೂರ್ಣವಾಗಿ ಚೇತರಿಸಿಕೊಂಡು ಶೀಘ್ರದಲ್ಲೇ ನನ್ನ ಸೇವೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.

ಅಂತೆಯೇ ದೆಹಲಿ ವಿಧಾನಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಆರ್ ಕೆಪುರಂ ಶಾಸಕರಾದ ಪರ್ಮಿಳಾ ಟೋಕಾ ಅವರು ನಿಯಮಾವಳಿಯಂತೆ ದೆಹಲಿ ವಿಧಾನಸಭೆ ಆವರಣದಲ್ಲೇ ಆಯೋಜಿಸಲಾಗಿದ್ದ ಆರ್ ಟಿ ಪಿಸಿಆರ್ ಟೆಸ್ಟ್ ಗೆ ಒಳಪಟ್ಟಿದ್ದರು. ಅವರ ವರದಿ ಕೂಡ ಪಾಸಿಟಿವ್ ಬಂದ ಕಾರಣ ಅವರು  ಅಧಿವೇಶನದಲ್ಲಿ ಪಾಲ್ಗೊಳ್ಳದೇ ವಾಪಸ್ ತೆರಳಿದ್ದಾರೆ. ಅಲ್ಲದೆ ತಮ್ಮ ಸಂಪರ್ಕಕ್ಕೆ ಬಂದವರೂ ಕೂಡ ಪರೀಕ್ಷೆಗೊಳಪಡುವಂತೆ ಸೂಚನೆ ನೀಡಿದ್ದಾರೆ.

ಈ ಹಿಂದೆ ಇದೇ ದೆಹಲಿ ವಿಧಾನಸಭೆಯ 4 ಶಾಸಕರು ಕೂಡ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸೋಮವಾರದ ವಿಶೇಷ ಅಧಿವೇಶನಕ್ಕೂ ಮುನ್ನ ರ್ಯಾಪಿಡ್ ಆ್ಯಂಟಿ ಜೆನ್ ಪರೀಕ್ಷೆಗೆ ಒಳಪಟ್ಟಿದ್ದ ಇಬ್ಬರು ಶಾಸಕರ ವರದಿ ನೆಗೆಟಿವ್ ಬಂದಿತ್ತು. ಆದರೆ ಬಳಿಕ  ನಡೆದ ಆರ್ ಟಿ ಪಿಸಿಆರ್ ಪರೀಕ್ಷೆಯಲ್ಲಿ ಶಾಸಕರಿಗೆ ಸೋಂಕು ದೃಢವಾಗಿತ್ತು. ಹೀಗಾಗಿ ಅಧಿವೇಶನವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಶಾಸಕರು ಮನೆಗೆ ತೆರಳಿದರು ಎನ್ನಲಾಗಿದೆ.

ದೆಹಲಿ ವಿಧಾನಸಭೆಯಲ್ಲಿ ಸೋಮವಾರ ಒಟ್ಟು 180 ಕೋವಿಡ್ 19 ಪರೀಕ್ಷೆ ಮಾಡಿದ್ದು, ಈ ಪರೀಕ್ಷೆಯಲ್ಲಿ ಶಾಸಕರು, ಪತ್ರಕರ್ತರು ಮತ್ತು ವಿಧಾನಸಭೆಯ ಸಿಬ್ಬಂದಿಗಳು, ಸಚಿವಾಲಯದ ಸಿಬ್ಬಂದಿಗಳೂ ಕೂಡ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com