ಅಗಾಸ್ಟಾ ವೆಸ್ಟ್‌ಲ್ಯಾಂಡ್ ಹಗರಣ: ಕ್ರಿಶ್ಚಿಯನ್ ಮೈಕೆಲ್, ರಾಜೀವ್ ಸಕ್ಸೇನಾ ವಿರುದ್ಧ ಸಿಬಿಐ ಪೂರಕ ಚಾರ್ಜ್‌ಶೀಟ್ ಸಲ್ಲಿಕೆ
ನವದೆಹಲಿ: ಅಗಾಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಚಾಪರ್ ಹಗರಣ ಪ್ರಕರಣದ ಆರೋಪಿ ಬ್ರಿಟಿಷ್ ಪ್ರಜೆ ಕ್ರಿಶ್ಚಿಯನ್ ಮೈಕೆಲ್ ಜೇಮ್ಸ್, ಉದ್ಯಮಿ ರಾಜೀವ್ ಸಕ್ಸೇನಾ ಮತ್ತು ಇತರ 13 ಜನರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಶನಿವಾರ ಪೂರಕ ಚಾರ್ಜ್‌ಶೀಟ್ ಸಲ್ಲಿಸಿದೆ.
ಸೆಪ್ಟೆಂಬರ್ 21 ರಂದು ಈ ವಿಷಯವನ್ನು ಪರಿಗಣಿಸಲು ಪಟ್ಟಿ ಮಾಡಿದ ದೆಹಲಿಯ ರೋಸ್ ಅವೆನ್ಯೂ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಅವರ ಮುಂದೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಮೂಲಗಳ ಪ್ರಕಾರ, ಮಾಜಿ ರಕ್ಷಣಾ ಕಾರ್ಯದರ್ಶಿ ಶಶಿಕಾಂತ್ ಶರ್ಮಾ ನಂತರ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಆಗಿ ನೇಮಕವಾಗಿದ್ದರು. ಈವರೆಗೆ ಶರ್ಮಾ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿಬಿಐ ಅನುಮತಿ ಪಡೆಯದ ಕಾರಣ ಚಾರ್ಜ್‌ಶೀಟ್‌ನಲ್ಲಿ ಆರೋಪಿಯಾಗಿ ಹೆಸರಿಸಲಾಗಿಲ್ಲ. ಶರ್ಮಾ ಅವರನ್ನು ಮತ್ತೊಂದು ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
3,600 ಕೋಟಿ ರೂ.ಗಳ ಅಗಸ್ಟಾವೆಸ್ಟ್‌ಲ್ಯಾಂಡ್ ವಿವಿಐಪಿ ಚಾಪರ್ಸ್ ಡೀಲ್ ಪ್ರಕರಣದ ಆರೋಪಿ ಮೈಕೆಲ್ ಅವರನ್ನು 2018 ರ ಡಿಸೆಂಬರ್‌ನಲ್ಲಿ ಯುಎಇಯಿಂದ ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಬಹು ಕೋಟಿ ಚಾಪರ್ ವ್ಯವಹಾರದಲ್ಲಿ ಅಕ್ರಮ ನಡೆದ ಆರೋಪಕ್ಕೆ ಸಂಬಂಧಿಸಿದಂತೆ ಆತನನ್ನು ಪ್ರಸ್ತುತ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಈ ಒಪ್ಪಂದದಲ್ಲಿ ಸಿಬಿಐ 'ಮಧ್ಯವರ್ತಿ' ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದರೆ, ಇಡಿ ಅವರ ವಿರುದ್ಧದ ಹಣ ವರ್ಗಾವಣೆ ಆರೋಪದ ಬಗ್ಗೆ ತನಿಖೆ ನಡೆಸುತ್ತಿದೆ.
ದುಬೈ ಮೂಲದ ರಾಜೀವ್ ಸಕ್ಸೇನಾ ಅವರನ್ನು ಕಳೆದ ವರ್ಷ ಜನವರಿಯಲ್ಲಿ ಯುಎಇಯಿಂದ ಹಸ್ತಾಂತರಿಸಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ