ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಸುರಕ್ಷತೆಯ ಲೋಪದೋಷ: ಕಳೆದ ಜುಲೈನಲ್ಲಿ ಶೋಕಾಸ್ ನೊಟೀಸ್ ನೀಡಿದ್ದ ಡಿಜಿಸಿಎ!

ಭಾರತೀಯ ವಿಮಾನಯಾನ ಪ್ರಾಧಿಕಾರ ಡಿಜಿಸಿಎ(Director General of Civil Aviation) ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಹಲವು ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಕಳೆದ ವರ್ಷ ಜುಲೈ 11ರಂದು ವಿಮಾನ ನಿಲ್ದಾಣ ನಿರ್ದೇಶಕರಿಗೆ ಶೋಕಾಸ್ ನೊಟೀಸ್ ಹೊರಡಿಸಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ. 
ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತ
ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತ

ನವದೆಹಲಿ: ಭಾರತೀಯ ವಿಮಾನಯಾನ ಪ್ರಾಧಿಕಾರ ಡಿಜಿಸಿಎ(Director General of Civil Aviation) ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಹಲವು ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಕಳೆದ ವರ್ಷ ಜುಲೈ 11ರಂದು ವಿಮಾನ ನಿಲ್ದಾಣ ನಿರ್ದೇಶಕರಿಗೆ ಶೋಕಾಸ್ ನೊಟೀಸ್ ಹೊರಡಿಸಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ. 

ಕೋಝಿಕ್ಕೋಡ್ ರನ್ ವೇಯಲ್ಲಿ ಬಿರುಕು ಮೂಡಿದೆ, ನೀರು ನಿಲುಗಡೆಯಾಗುತ್ತದೆ ಮತ್ತು ಅಧಿಕ ರಬ್ಬರ್ ಶೇಖರಣೆಯಾಗುತ್ತದೆ ಎಂಬಿತ್ಯಾದಿ ಲೋಪದೋಷಗಳ ಪಟ್ಟಿ ಮಾಡಿ ಶೋಕಾಸ್ ನೊಟೀಸನ್ನು ಡಿಜಿಸಿಎ ಕೊಟ್ಟಿತ್ತು. ಕಳೆದ ವರ್ಷ ಜುಲೈ 2ರಂದು ಸೌದಿ ಅರೇಬಿಯಾದ ಡಮ್ಮನ್ ನಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ಆಗುವ ವೇಳೆ ಡಿಜಿಸಿಎ ತಪಾಸಣೆ ನಡೆಸಿತ್ತು ಎಂಬ ಮಾಹಿತಿ ಕೂಡ ನಿನ್ನೆ ಅಪಘಾತದ ಬಳಿಕ ಹೊರಬಿದ್ದಿದೆ.

ಇದಾಗಿ ಸರೀ ಒಂದು ವರ್ಷಕ್ಕೆ ನಿನ್ನೆ ದುಬೈಯಿಂದ ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಪಘಾತಕ್ಕೀಡಾಗಿ ಹತ್ತಾರು ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. ಅದರಲ್ಲಿ ವಿಮಾನದ ಇಬ್ಬರು ಪೈಲಟ್ ಗಳೂ ಸೇರಿದ್ದಾರೆ. 

ಕಳೆದ ವರ್ಷ ಜುಲೈ 2ರ ಘಟನೆ ಬಳಿಕ ಡಿಜಿಸಿಎ ಅಧಿಕಾರಿಗಳು ಮತ್ತೆ ಎರಡು ದಿನ ಬಿಟ್ಟು ಅಂದರೆ ಕಳೆದ ವರ್ಷ ಜುಲೈ 4 ಮತ್ತು 5ರಂದು ಕೋಝಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿ ಕೂಲಂಕಷ ತಪಾಸಣೆ ಮಾಡಿದ್ದರು, ಆಗ ರನ್ ವೇಯಲ್ಲಿ ಹಲವು ಸುರಕ್ಷತಾ ಲೋಪದೋಷಗಳಿವೆ ಎಂಬುದು ಗಮನಕ್ಕೆ ಬಂದಿತ್ತು. ಅದಾಗಿ ಜುಲೈ 11ರಂದು ಕಳೆದ ವರ್ಷ ನಿಲ್ದಾಣದ ನಿರ್ದೇಶಕ ಕೆ ಶ್ರೀನಿವಾಸ್ ರಾವ್ ಅವರಿಗೆ ಶೋಕಾಸ್ ನೊಟೀಸ್ ನೀಡಲಾಗಿತ್ತು ಎಂದು ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಶೋಕಾಸ್ ನೊಟೀಸ್ ನೀಡಿದ ನಂತರ ನಿರ್ದೇಶಕ ಶ್ರೀನಿವಾಸ್ ರಾವ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿತ್ತೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಅವರಿಗೆ ನೀಡಲಾಗಿದ್ದ ಶೋಕಾಸ್ ನೊಟೀಸ್ ನ ಪ್ರತಿ ಪಿಟಿಐ ಸುದ್ದಿಸಂಸ್ಥೆಗೆ ಲಭ್ಯವಾಗಿದೆ. ಅದರಲ್ಲಿ ರನ್ ವೇ 28, ರನ್ ವೇ 10ರ ಎಡ, ಬಲ ಭಾಗಗಳಲ್ಲಿ ಭೂ ಸ್ಪರ್ಶ ವಲಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ವಿಮಾನ ಭೂ ಸ್ಪರ್ಶ ಮಾಡುವ ಮೊದಲ ಮೇಲ್ಮೈ ಆಗಿದೆ. ಭೂಸ್ಪರ್ಶ ವಲಯದ ಎಡಬದಿಗಳಲ್ಲಿ ಮೂರು ಮೀಟರ್ ವರೆಗೆ ಅಧಿಕ ರಬ್ಬರ್ ಶೇಖರಣೆಯಾಗಿದೆ. 1.5 ಮೀಟರ್ ಉದ್ದದವರೆಗೆ ನೀರು ನಿಂತುಕೊಂಡಿದೆ, ವಿಮಾನ ನಿಲ್ದಾಣದಲ್ಲಿ ಹಲವು ಬಿರುಕುಗಳಿವೆ, ಆಪ್ರೊನ್ ಮೇಲ್ಮೈಯ(ವಿಮಾನ ಬಂದು ನಿಲ್ಲುವ, ಇಂಧನ ತುಂಬಿಸುವ, ಪ್ರಯಾಣಿಕರು ಹತ್ತಿಳಿಯುವ ಸ್ಥಳ) 111 ಮೀಟರ್ ನಷ್ಟು ಉದ್ದಕ್ಕೆ ಹಾನಿಯಾಗಿದೆ ಎಂದು ಕೂಡ ಶೋಕಾಸ್ ನೊಟೀಸ್ ನಲ್ಲಿ ಹೇಳಲಾಗಿದೆ. 

ವಿಮಾನ ಸಂಖ್ಯೆ 1 ರ ಹಿಂದಿನ ಆಪ್ರೊನ್ ಪ್ರದೇಶದ ಹಿಂದೆ ಸರಿಸುಮಾರು ಐದು ಅಡಿ ಆಳದ ಕಡಿದಾದ ಕೆಳಕ್ಕೆ ಇಳಿಜಾರು ಕಂಡುಬರುತ್ತದೆ, ಅದನ್ನು ನೆಲಸಮ ಮತ್ತು ಶ್ರೇಣೀಕರಿಸುವ ಅಗತ್ಯವಿದೆ, ಹೀಗೆ ಹತ್ತಾರು ಲೋಪದೋಷಗಳನ್ನು ಅದರಲ್ಲಿ ಗುರುತಿಸಲಾಗಿದೆ. 

ಏರ್ ಇಂಡಿಯಾದ ಉಪ ಸಂಸ್ಥೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ದುರಂತ ಹಿನ್ನೆಲೆಯಲ್ಲಿ ಇಂದು ರಕ್ಷಣಾ ಕಾರ್ಯಕ್ಕೆ ಮೂರು ರಕ್ಷಣಾ ವಿಮಾನಗಳನ್ನು ಕಳುಹಿಸಲಾಗಿದೆ. 

ಕೋವಿಡ್-19 ಹಿನ್ನೆಲೆಯಲ್ಲಿ ಮಾರ್ಚ್ 23ರಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿತ್ತು. ಆದರೆ ವಿಶೇಷ ಸಹಾಯದಡಿ ವಂದೇ ಭಾರತ್ ಯೋಜನೆಯಡಿ ಮೇ 6ರಿಂದ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರಿಗೆ ದೇಶಕ್ಕೆ ಬರಲು ಅನುಕೂಲವಾಗಲು ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವನ್ನು ಕಳುಹಿಸುತ್ತಿದೆ. ಈ ಯೋಜನೆಯಡಿ ಕೆಲವು ಖಾಸಗಿ ವಿಮಾನಗಳು ಕೂಡ ಹಾರಾಟ ಮಾಡುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com