ವಿಜಯವಾಡದ ಕೋವಿಡ್ ಕೇರ್ ಹೊಟೇಲ್ ನಲ್ಲಿ ಅಗ್ನಿ ಅವಘಡ, ಮೃತರ ಸಂಖ್ಯೆ 10ಕ್ಕೇರಿಕೆ, ಸರ್ಕಾರ ತಲಾ 50 ಲಕ್ಷ ರೂ ಪರಿಹಾರ  

ಇತ್ತೀಚೆಗೆ ದುರಂತದ ಮೇಲೆ ದುರಂತಗಳು ನಡೆಯುತ್ತವೇ ಇವೆ. ಆಂಧ್ರಪ್ರದೇಶದ ವಿಜಯವಾಡದ ಸ್ವರ್ಣ ಪ್ಯಾಲೆಸ್ ಹೊಟೇಲ್ ನಲ್ಲಿ ಭಾನುವಾರ ನಸುಕಿನ ಜಾವ ಅಗ್ನಿ ಅವಘಡ ಉಂಟಾಗಿದ್ದು ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ ಆಗಿದೆ. 

Published: 09th August 2020 08:26 AM  |   Last Updated: 09th August 2020 01:04 PM   |  A+A-


Fire personnel in relief work

ಸಿಬ್ಬಂದಿಯಿಂದ ರಕ್ಷಣಾ ಕಾರ್ಯ

Posted By : Sumana Upadhyaya
Source : ANI

ವಿಜಯವಾಡ: ಇತ್ತೀಚೆಗೆ ದುರಂತದ ಮೇಲೆ ದುರಂತಗಳು ನಡೆಯುತ್ತವೇ ಇವೆ. ಆಂಧ್ರಪ್ರದೇಶದ ವಿಜಯವಾಡದ ಸ್ವರ್ಣ ಪ್ಯಾಲೆಸ್ ಹೊಟೇಲ್ ನಲ್ಲಿ ಭಾನುವಾರ ನಸುಕಿನ ಜಾವ ಅಗ್ನಿ ಅವಘಡ ಉಂಟಾಗಿ 10 ಮಂದಿ ಮೃತಪಟ್ಟಿದ್ದು, 18 ಮಂದಿ ಗಾಯಗೊಂಡಿದ್ದಾರೆ.

ಇಂದು ನಸುಕಿನ ಜಾವ 5ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಹೊತ್ತಿ ಉರಿಯತೊಡಗಿತು, ನಂತರ ಅದು ನೆಲಮಹಡಿ ಮತ್ತು ಮೊದಲ ಮಹಡಿಗೆ ವ್ಯಾಪಿಸಿತು. ಹೊಟೇಲ್ ನಿಂದ ದಟ್ಟ ಹೊಗೆ ಹೊರಸೂಸ ತೊಡಗಿತು. ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಪೊಲೀಸರೊಂದಿಗೆ ಸ್ಥಳಕ್ಕೆ ದೌಡಾಯಿಸಿ 30 ಮಂದಿಯನ್ನು ರಕ್ಷಿಸಿದ್ದಾರೆ. ಸ್ಥಳಕ್ಕೆ ಕ್ಷಿಪ್ರ ಕಾರ್ಯಪಡೆ ಮತ್ತು ಎನ್ ಡಿಆರ್ ಎಫ್ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿದರು. ಹೊಟೇಲ್ ನ್ನು ಕೋವಿಡ್-19 ರೋಗಿಗಳ ಚಿಕಿತ್ಸೆಗೆ ವಿಜಯವಾಡ ನಗರ ಪಾಲಿಕೆ ಪಡೆದುಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

ಸ್ಟೈರ್ ಕೇಸ್ ನ್ನು ಬಳಸಲು ಸಾಧ್ಯವಾಗದೆ ಅಗ್ನಿಶಾಮಕ ಸಿಬ್ಬಂದಿ ಕೋಣೆಗಳ ಕಿಟಕಿಗಳನ್ನು ಒಡೆದು ಏಣಿಗಳ ಸಹಾಯದಿಂದ 5 ಮಹಡಿಯ ಹೊಟೇಲ್ ನಿಂದ ಜನರನ್ನು ರಕ್ಷಿಸಲಾಯಿತು. 

ಹೊಟೇಲ್ ನಲ್ಲಿ ಸುಮಾರು 22 ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಬೆಂಕಿ ದುರಂತ ನಂತರ ಎಲ್ಲರನ್ನೂ ಸ್ಥಳಾಂತರಿಸುತ್ತಿದ್ದೇವೆ. ಪ್ರಾಥಮಿಕ ವರದಿಯಿಂದ ಬೆಂಕಿ ಹತ್ತಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ತಿಳಿದುಬಂದಿದೆ. ಅದನ್ನು ಖಚಿತಪಡಿಸಬೇಕಿದೆ ಎಂದು ಕೃಷ್ಣ ಜಿಲ್ಲಾಧಿಕಾರಿ ಮೊಹಮ್ಮದ್ ಇಮ್ತಿಯಾಜ್ ತಿಳಿಸಿದ್ದಾರೆ. 

ಆರಂಭದಲ್ಲಿ 7 ಮಂದಿ ಮೃತಪಟ್ಟಿದ್ದರು. ಪೊಲೀಸರು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಮೂವರು ಮೃತಪಟ್ಟಿದ್ದಾರೆ. 

ಭಯದಿಂದ ಸ್ವರ್ಣ ಹೊಟೇಲ್ ನ ಮೊದಲ ಮಹಡಿಯಿಂದ ಕೆಳಗೆ ಹಾರಿದ ನಾಲ್ವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. 

ವಿಜಯವಾಡ ಪೊಲೀಸ್ ಆಯುಕ್ತ ಬಿ ಶ್ರೀನಿವಾಸುಲು ಮತ್ತು ಡಿಜಿಪಿ ಗೌತಮ್ ಸಾವಂಗ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. 

ಮುಖ್ಯಮಂತ್ರಿ ಆಘಾತ: ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಬೆಂಕಿ ಅನಾಹುತದ ಬಗ್ಗ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದು, ಘಟನೆಗೆ ಏನು ಕಾರಣ ಎಂಬ ಬಗ್ಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದು, ಗಾಯಗೊಂಡವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. 
ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 50 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. 

ಪ್ರಧಾನಿ ಸಂತಾಪ: ವಿಜಯವಾಡ ಹೊಟೇಲ್ ನಲ್ಲಿ ತಂಗಿದ್ದ ಕೋವಿಡ್-19 ರೋಗಿಗಳು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮೃತಪಟ್ಟ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಪ್ರಾಣ ಕಳೆದುಕೊಂಡ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದಿದ್ದಾರೆ. ಆಂಧ್ರ ಪ್ರದೇಶ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದೇನೆ ಎಂದಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp