ಜಮ್ಮು-ಕಾಶ್ಮೀರ: ಎಲ್ ಇಟಿ ಕಮಾಂಡರ್ ಸೇರಿ ಮೂವರು ಉಗ್ರರ ಹತ್ಯೆ, 4ಕ್ಕೇರಿದ ಹುತಾತ್ಮ ಯೋಧರ ಸಂಖ್ಯೆ

ಉತ್ತರ ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆ ಪೊಲೀಸರು ಲಷ್ಕರ್ ಇ ತೊಯ್ಬಾ ಸಂಘಟನೆಯ ಉನ್ನತ ಕಮಾಂಡರ್ ಸೇರಿ ಮತ್ತಿಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಪೊಲೀಸರಿಂದ ಪ್ರದೇಶದಲ್ಲಿ ತಪಾಸಣೆ
ಪೊಲೀಸರಿಂದ ಪ್ರದೇಶದಲ್ಲಿ ತಪಾಸಣೆ

ಜಮ್ಮು-ಕಾಶ್ಮೀರ: ಉತ್ತರ ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಕ್ರೀರಿ ಪ್ರದೇಶದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 4ಕ್ಕೇರಿದೆ.

ಉಗ್ರರೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ನಿನ್ನೆ ಬಾರಮುಲ್ಲಾದಲ್ಲಿ ಓರ್ವ ವಿಶೇಷ ಪೊಲೀಸ್ ಅಧಿಕಾರಿ ಸೇರಿ ಇಬ್ಬರು ಸಿಆರ್'ಪಿಎಫ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಹತ್ತಿರದಲ್ಲಿದ್ದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆಂದು ತಿಳಿದುಬಂದಿದೆ. ಹುತಾತ್ಮ ಯೋಧರಿಗೆ ಇಂದು ಬುದ್ಗಾಮ್ ಜಿಲ್ಲೆಯಲ್ಲಿ ಅಂತಿಮ ನಮನವನ್ನು ಸಿಆರ್ ಪಿ ಎಫ್ ವತಿಯಿಂದ ನೆರವೇರಿಸಲಾಯಿತು.

ಹುತಾತ್ಮ ಜವಾನರಲ್ಲಿ ಇಬ್ಬರಾದ ಚಾಲಕ ಖುರ್ಷಿದ್ ಮತ್ತು ಕಾನ್ಸ್ಟೇಬಲ್ ಲವ್ ಕುಶ್ ಬಿಹಾರ ಮೂಲದವರಾಗಿದ್ದಾರೆ. ಸಿಆರ್ ಪಿಎಫ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಉಗ್ರಗಾಮಿಗಳಿಗೆ ದಿಟ್ಟ ಉತ್ತರ ನೀಡಿದ್ದು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುತ್ತಿದ್ದೇವೆ. ಅವರ ತ್ಯಾಗ ನಿಷ್ಟ್ರಯೋಜಕವಾಗಲು ಬಿಡುವುದಿಲ್ಲ ಎಂದು ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಅವರ ಸಲಹೆಗಾರ ಆರ್ ಆರ್ ಭಟ್ನಾಗರ್ ತಿಳಿಸಿದ್ದಾರೆ.

ಈಗಲೂ ಭದ್ರತಾ ಪಡೆಗಳ ಕಾರ್ಯಾಚರಣೆ ಮುಂದುವರಿದಿದೆ. ಸಿಆರ್ ಪಿಎಫ್, ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಕಾಶ್ಮೀರ ಸಿಆರ್ ಪಿಎಫ್ ವಿಶೇಷ ಮಹಾ ನಿರ್ದೇಶಕ ಝುಲ್ಫಿಕರ್ ಹಸ್ಸನ್ ತಿಳಿಸಿದ್ದಾರೆ.

ಇದಕ್ಕೂ ಮುನ್ನ ನಿನ್ನೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಬಾರಮುಲ್ಲಾ ಜಿಲ್ಲೆಯಲ್ಲಿ ಎನ್ ಕೌಂಟರ್ ನಲ್ಲಿ ಹುತಾತ್ಮರಾದ ಭದ್ರತಾ ಪಡೆ ಯೋಧರಿಗೆ ಅಂತಿಮ ನಮನ ಸಲ್ಲಿಸಿದರು.

ನಿನ್ನೆ ನಡೆದ ಎನ್ ಕೌಂಟರ್ ನಲ್ಲಿ ಭಾರತೀಯ ಯೋಧರು ಲಷ್ಕರ್​ ಎ ತೊಯ್ಬಾದ ಉನ್ನತ ಕಮಾಂಡರ್​ ಸಜ್ಜಾದ್​​ನನ್ನು ಕೊಂದು ಹಾಕಿದ್ದರು. ಇದಾದ ಬಳಿಕ ಪೊಲೀಸರು, ಸಿಆರ್ ಪಿಎಫ್ ಮತ್ತು ಸೇನಾ ಯೋಧರು ಪ್ರದೇಶಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದರು.

ಸಜ್ಜಾದ್ ನನ್ನು ಕೊಂದು ಹಾಕಿದ್ದು ಸೇನೆಯ ಬಹುಮುಖ್ಯ ಸಾಧನೆಯಾಗಿದ್ದು ಈತ ಅನೇಕ ಯುವಕರನ್ನು ಭಯೋತ್ಪಾದನೆಗೆ ಸೆಳೆದುಕೊಳ್ಳುತ್ತಿದ್ದ. ಸಜ್ಜಾದ್ ನ ಸಾವಿನ ನಂತರ ನಾವು 20 ಯುವಕರನ್ನು ಬಂಧಿಸಿದ್ದೇವೆ ಎಂದು ಡಿಜಿಪಿ ದಿಲ್ ಬಾಗ್ ಸಿಂಗ್ ತಿಳಿಸಿದ್ದಾರೆ.

ನಂತರ ಇಲ್ಲಿನ ಶೋಪಿಯಾನ್ ಜಿಲ್ಲೆಯ ಮಲ್ದೆರಾ ಪ್ರದೇಶದಲ್ಲಿ ಉಗ್ರಗಾಮಿ ಸಂಘಟನೆಗೆ ಹೊಸದಾಗಿ ನೇಮಕಗೊಂಡ ಭಯೋತ್ಪಾದಕನನ್ನು ಭದ್ರತಾ ಪಡೆ ಪೊಲೀಸರು ಬಂಧಿಸಿದ್ದಾರೆ. ಜಮ್ಮು-ಕಾಶ್ಮೀರ ವಲಯ ಪೊಲೀಸರು ಹೊಸದಾಗಿ ನೇಮಕಗೊಂಡ ಉಗ್ರನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com