ಬಿಜೆಪಿ ಜೊತೆ ಕೆಲ ನಾಯಕರು ಶಾಮೀಲಾಗಿದ್ದಾರೆ: ರಾಹುಲ್ ಹೇಳಿಕೆಗೆ ಕಪಿಲ್ ಸಿಬಲ್ ಕಿಡಿ

ಬಿಜೆಪಿ ಜೊತೆ ಶಾಮೀಲಾಗಿ ಕೆಲವರು ಪಕ್ಷದ ಅಧ್ಯಕ್ಷ ಸ್ಥಾನದ ಕುರಿತು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಕಪಿಲ್ ಸಿಬಲ್
ಕಪಿಲ್ ಸಿಬಲ್

ನವದೆಹಲಿ: ಬಿಜೆಪಿ ಜೊತೆ ಶಾಮೀಲಾಗಿ ಕೆಲವರು ಪಕ್ಷದ ಅಧ್ಯಕ್ಷ ಸ್ಥಾನದ ಕುರಿತು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ, ಪಕ್ಷದ ಅಧ್ಯಕ್ಷ ಸ್ಥಾನದ ಕುರಿತು ಬರೆಯಲಾಗಿದ್ದ ಪತ್ರದ ಕುರಿತು ರಾಹುಲ್ ಗಾಂಧಿ ಅವರಾಡಿದ ಮಾತೊಂದು ಹಿರಿಯ ನಾಯಕರನ್ನು ಕೆರಳಿಸಿದೆ.

ಸೋನಿಯಾ ಗಾಂಧಿ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿದಾಗಲೇ ಉದ್ದೇಶಪೂರ್ವಕಾಗಿ ಅಧ್ಯಕ್ಷ ಸ್ಥಾನ ಬದಲಿಸುವ ಕುರಿತು ಕೆಲವರು ಪತ್ರ ಬರೆದಿದ್ದಾರೆ. ಪಕ್ಷದ ಕೆಲವು ನಾಯಕರು ಬಿಜೆಪಿ ಜೊತೆ ಶಾಮೀಲಾಗಿದ್ದಾರೆ ಎಂದು ರಾಹುಲ್ ಹರಿಹಾಯ್ದಿದ್ದಾರೆ. ಅಲ್ಲದೇ ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲೇ ಈ ಕುರಿತು ವಿವಾದ ಸೃಷ್ಟಿಸಲು ತಂತ್ರ ಹೆಣೆಯಲಾಗಿದೆ ಎಂದೂ ರಾಹುಲ್ ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ಆರೋಪಕ್ಕೆ ಕೆರಳಿ ಕೆಂಡಾಮಂಡಲವಾಗಿರುವ ಹಿರಿಯ ನಾಯಕ ಕಪಿಲ್ ಸಿಬಲ್, ಕಳೆದ 30 ವರ್ಷಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕತೆಯಿಂದ ದುಡಿದವರಿಗೆ ರಾಹುಲ್ ಅಪಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದವರ ಪೈಕಿ ಕಪಿಲ್ ಸಿಬಲ್ ಕೂಡ ಒಬ್ಬರಾಗಿದ್ದು, ರಾಹುಲ್ ಗಾಂಧಿ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. 

ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಪಕ್ಷದ ಪರವಾಗಿ ಯಶಸ್ವಿಯಾಗಿ ಹೋರಾಡಿದ್ದೇವೆ. ಮಣಿಪುರದಲ್ಲಿ ಪಕ್ಷ ಅಧಿಕಾರ ಕಳೆದುಕೊಳ್ಳಬಾರದು ಎಂದು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಕಳೆದ 30 ವರ್ಷಗಳಲ್ಲಿ ಬಿಜೆಪಿಗೆ ಅನುಕೂಲವಾಗುವಂತ ಒಂದೇ ಒಂದು ಮಾತನ್ನೂ ನಾವು ಆಡಿಲ್ಲ. ಆದರೂ ರಾಹುಲ್ ನಮ್ಮ ಮೇಲೆ ಗಂಭೀರ ಆರೋಪ ಮಾಡಿದ್ದಾರೆ ಎಂದು ಕಪಿಲ್ ಸಿಬಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com