ರೈತರನ್ನು ಖಲಿಸ್ತಾನಿಗಳು ಎಂದ ಸಚಿವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು: ಸುಖ್ಬೀರ್ ಸಿಂಗ್ ಬಾದಲ್

ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಖಲಿಸ್ತಾನಿಗಳು ಮತ್ತು ರಾಷ್ಟ್ರ ವಿರೋಧಿ ಎಂದು ಕರೆದ ಎಲ್ಲಾ ಸಚಿವರು ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಶಿರೋಮಣಿ ಅಕಾಲಿ ದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಒತ್ತಾಯಿಸಿದ್ದಾರೆ.
ಶಿರೋಮಣಿ ಅಕಾಲಿ ದಳ ಮುಖ್ಯಸ್ಥ  ಸುಖ್ಬೀರ್ ಸಿಂಗ್ ಬಾದಲ್
ಶಿರೋಮಣಿ ಅಕಾಲಿ ದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್

ಅಮೃತಸರ: ಮೂರು ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ರೈತರ ಬೇಡಿಕೆಗಳಿಗೆ ಮಣಿಯದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಶಿರೋಮಣಿ ಅಕಾಲಿ ದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್, ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಖಲಿಸ್ತಾನಿಗಳು ಮತ್ತು ರಾಷ್ಟ್ರ ವಿರೋಧಿ ಎಂದು ಕರೆದ ಎಲ್ಲಾ ಸಚಿವರು ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಾದಲ್, ಕೃಷಿಕ ವಲಯಕ್ಕೆ ಅತೃಪ್ತಿಯನ್ನುಂಟು ಮಾಡಿರುವ ಕಾನೂನುಗಳನ್ನು ರದ್ದುಗೊಳಿಸದೆ ಕೇಂದ್ರ ಸರ್ಕಾರ ದಬ್ಬಾಳಿಕೆ ಏಕೆ ನಡೆಸಬೇಕು ಎಂದು ಪ್ರಶ್ನಿಸಿದರು. 

ರೈತರನ್ನು ಖಲಿಸ್ತಾನಿಗಳು ಎಂದು ಕರೆಯುವ ಮೂಲಕ ಪ್ರತಿಭಟನೆಗೆ ಅಪಖ್ಯಾತಿ ತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಪ್ರತಿಭಟನಾಕಾರರಿಗೆ ರಾಷ್ಟ್ರ ವಿರೋಧಿ ಎಂಬ ಹಣೆ ಪಟ್ಟಿ ಕಟ್ಟಲು ಹೊರಟಿರುವುದು ದುರದೃಷ್ಟಕರವಾಗಿದೆ. ಇಂತಹ ಹೇಳಿಕೆಗಳನ್ನು ನೀಡಿದ ಸಚಿವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು, ಇಂತಹ ಹೇಳಿಕೆಗಳು ಮತ್ತು ಕೇಂದ್ರ ಸರ್ಕಾರದ ವರ್ತನೆಯನ್ನು ಖಂಡಿಸುವುದಾಗಿ ಅಕಾಲಿ ದಳದ ಮುಖ್ಯಸ್ಥರು ಹೇಳಿದರು.

ರೈತರ ಧ್ವನಿಯನ್ನು ಆಲಿಸುವ ಬದಲು ಅಡಗಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ರೈತರಿಗೆ ಕೃಷಿ ಕಾನೂನುಗಳ ಬೇಕಾಗಿಲ್ಲ, ರೈತರಿಗಾಗಿ ಮಾಡಿರುವ ಕಾನೂನುಗಳು ಅವರಿಗೆ ಬೇಕಾಗಿಲ್ಲದಿರುವಾಗ ಕೇಂದ್ರ ಸರ್ಕಾರ ಏಕೆ ದಬ್ಬಾಳಿಕೆ ನಡೆಸುತ್ತಿದೆ. ರೈತರ ಸಮಸ್ಯೆಗಳನ್ನು ಆಲಿಸಬೇಕಾಗಿ ಪ್ರಧಾನ ಮಂತ್ರಿಗಳನ್ನು ಮನವಿ ಮಾಡುತ್ತೇನೆ ಎಂದರು.

ತಮ್ಮ ಬೇಡಿಕೆಗಳಿಗೆ ಗಟ್ಟಿಯಾಗಿ ಅಂಟಿಕೊಂಡು ಕಳೆದ 17 ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರು, ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ, ಆದರೆ ಮೊದಲು ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಚರ್ಚಿಸಬೇಕು. ಇಲ್ಲದಿದ್ದರೆ ಹೊಸ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಘೋಷಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com