ಜನವರಿ 2 ರಂದು ಎಲ್ಲಾ ರಾಜ್ಯಗಳಲ್ಲೂ ಕೊರೋನಾ ಲಸಿಕೆ ನೀಡುವ ತಾಲೀಮು

ಜನವರಿ 2 ರಿಂದ ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಕೋವಿಡ್-19 ಲಸಿಕೆ ನೀಡುವ ಪೂರ್ವಾಭ್ಯಾಸ ಆರಂಭವಾಗಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಜನವರಿ 2 ರಂದು ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಕೋವಿಡ್-19 ಲಸಿಕೆ ನೀಡುವ ಪೂರ್ವಾಭ್ಯಾಸ ನಡೆಯಲಿದೆ.

ಈ ಕರಿತು ಇಂದು ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದಕ್ಕೂ ಮುನ್ನ ಆಂಧ್ರಪ್ರದೇಶ, ಗುಜರಾತ್, ಪಂಜಾಬ್ ಮತ್ತು ಅಸ್ಸಾಂಗಳಲ್ಲಿ ಲಸಿಕೆ ವಿತರಣೆ ವ್ಯವಸ್ಥೆಯ ಸಿದ್ಧತೆಯನ್ನು ಮೌಲ್ಯಮಾಪನ ಮಾಡಲು ನಡೆಸಲಾಗಿದ್ದ ಎರಡು ದಿನಗಳ ಪೂರ್ವಾಭ್ಯಾಸ ಯಶಸ್ವಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳು ತಮ್ಮ ರಾಜಧಾನಿಯನ್ನು ಹೊರತುಪಡಿಸಿ ಪ್ರಮುಖ ನಗರಗಳಲ್ಲಿ ಕೋವಿಡ್-19 ಲಿಸಿಕೆ ನೀಡುವ ತಾಲೀಮು ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಲಸಿಕೆ ನೀಡುವ ಕುರಿತು ಹಲವಾರು ರಾಜ್ಯಗಳು ಸೂಕ್ತ ಕಾರ್ಯ ಯೋಜನೆಯನ್ನು ರೂಪಿಸಿವೆ. ಸೋಂಕು ನಿಯಂತ್ರಣ ಪ್ರದೇಶದಿಂದ ನೀಡುತ್ತಿರುವ ಲಸಿಕೆಯನ್ನು ಅತ್ಯಂತ ವ್ಯವಸ್ಥಿತಗೊಳಿಸಲು ಆರೋಗ್ಯ ಕಾರ್ಯಕರ್ತರು ಹಾಗೂ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಈ ಸಂಬಂಧ ರಾಷ್ಟ್ರಮಟ್ಟದಲ್ಲಿ 2,360 ಮಂದಿಗೆ ಸೂಕ್ತ ತರಬೇತಿ ನೀಡಲಾಗಿದ್ದು, ಇವರು ವಿವಿಧ ಹಂತಗಳಲ್ಲಿ ಲಸಿಕೆ ನೀಡುವ ಕುರಿತು ಮಾರ್ಗದರ್ಶನ ಮಾಡುತ್ತಿದ್ದಾರೆ. 6,81,604 ಮಂದಿ ವೈದ್ಯಕೀಯ ಅಧಿಕಾರಿಗಳನ್ನು ಈ ಉದ್ದೇಶಕ್ಕಾಗಿ ಸಜ್ಜುಗೊಳಿಸಲಾಗಿದೆ. ಲಸಿಕೆ ನೀಡುವ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ತೀವ್ರಗೊಳ್ಳಲಿದೆ.

ಲಸಿಕೆ ತಾಲೀಮು ಹೇಗೆ ನಡೆಯುತ್ತದೆ?
ಲಸಿಕೆ ನೀಡುವ ವೇಳೆ ಎದುರಾಗುವ ಸಮಸ್ಯೆಗಳು, ಸವಾಲುಗಳು ತಾಲೀಮು ವೇಳೆ ತಿಳಿದುಬರಲಿದೆ. ಲಸಿಕೆಯನ್ನು ವಿಮಾನಗಳ ಮೂಲಕ ರಾಜ್ಯಗಳಿಗೆ ಸಾಗಿಸಬೇಕು.‌ ಎಲ್ಲೆಡೆ ರೆಫ್ರಿಜರೇಟರ್ ಇಟ್ಟು, ಅವುಗಳಲ್ಲಿ ಲಸಿಕೆ ಸಂಗ್ರಹಿಸಿಡಬೇಕು.

ಲಸಿಕೆ ನೀಡಿಕೆಗೆ ಫಲಾನುಭವಿಗಳ ಪಟ್ಟಿಯನ್ನು ಕೊವಿನ್ ಆ್ಯಪ್​ನಲ್ಲಿ ರಿಜಿಸ್ಟರ್ ಮಾಡಲಾಗಿರುತ್ತದೆ.‌ ಆದ್ಯತೆ ಪಟ್ಟಿಯಲ್ಲಿರೋರಿಗೆ ಮಾತ್ರ ಲಸಿಕೆ ನೀಡಬೇಕು. ಲಸಿಕೆ‌ ನೀಡಿಕೆಗೆ ಸೂಕ್ತ ಸ್ಥಳಾವಕಾಶ ಇರಬೇಕು. ಈಗಾಗಲೇ ಕೇಂದ್ರ ಸರ್ಕಾರ ಲಸಿಕೆ ನೀಡಿಕೆಗೆ ಮಾರ್ಗಸೂಚಿ ನೀಡಿದೆ. ಆ ಮಾರ್ಗಸೂಚಿ ಪ್ರಕಾರ ಲಸಿಕೆ ನೀಡಬೇಕು. ‌ಇದನ್ನು ಹೊರತುಪಡಿಸಿ ಬೇರೆ ವಿಚಾರಗಳಲ್ಲಿ ಯಾವ ರೀತಿಯ ಸಮಸ್ಯೆಗಳು ಎದುರಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಲಸಿಕೆ ನೀಡಿಕೆಯ ತಾಲೀಮು ನಡೆಸಲಾಗುತ್ತಿದೆ.

ಭಾರತದಲ್ಲಿ ಗಣ್ಯರಿಗೆ ಭದ್ರತೆ ನೀಡುವ ಸಂದರ್ಭದಲ್ಲೂ ಕೂಡ ಭದ್ರತಾ ಪಡೆಗಳು ತಾಲೀಮು ನಡೆಸುತ್ತವೆ. ಉಗ್ರರ ವಿರುದ್ಧ ಕಾರ್ಯಾಚರಣೆಯ ಅಣಕು ಪ್ರದರ್ಶನಗಳು ನಡೆಯುತ್ತದೆ. ಬೆಂಕಿ ನಂದಿಸಲು ಕೂಡ ಅಣಕು ಕಾರ್ಯಾಚರಣೆ ನಡೆಯುತ್ತದೆ. ವಿಪತ್ತಿನ‌ ಸಂದರ್ಭದಲ್ಲಿ ಜನರ ರಕ್ಷಣೆಯ ಅಣಕು ಕಾರ್ಯಾಚರಣೆ ನಡೆಯುತ್ತದೆ. ಇದೀಗ ಅದೇ ರೀತಿಯಲ್ಲಿ ಕೊರೋನಾ ವೈರಸ್ ವಿರುದ್ಧದ ಲಸಿಕೆ ನೀಡಿಕೆಯ ತಾಲೀಮು ಅಥವಾ ಪೂರ್ವಾಭ್ಯಾಸ ನಡೆಯುತ್ತಿರುವುದು ವಿಶೇಷವೆಂದೇ ಹೇಳಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com