ಬಿಜೆಪಿ ವಿರುದ್ಧ ಮಹಾ ಸಿಎಂ ವಾಗ್ದಾಳಿ, ಬುಲೆಟ್ ರೈಲು 'ಬಿಳಿ ಆನೆ' ಎಂದ ಉದ್ಧವ್ ಠಾಕ್ರೆ

ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಅಹಮದಾಬಾದ್ ಮತ್ತು ಮುಂಬೈ ನಡುವಿನ ಬುಲೆಟ್ ರೈಲು ಯೋಜನೆಯನ್ನು 'ಬಿಳಿ ಆನೆ' ಹೋಲಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಅಹಮದಾಬಾದ್ ಮತ್ತು ಮುಂಬೈ ನಡುವಿನ ಬುಲೆಟ್ ರೈಲು ಯೋಜನೆಯನ್ನು 'ಬಿಳಿ ಆನೆ' ಹೋಲಿಸಿದ್ದಾರೆ.

ಬುಲೆಟ್ ರೈಲು ಯೋಜನೆಯಿಂದ ರಾಜ್ಯದ ಕೈಗಾರಿಕೆಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂಬುದು ನನಗೆ ಮನವರಿಕೆಯಾದರೆ ಮಾತ್ರ ಆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿವಸೇನಾ ಮುಖವಾಣಿ ಸಾಮ್ನಾಗೆ ನೀಡಿದ ಸಂದರ್ಶನದಲ್ಲಿ ಠಾಕ್ರೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಶಿವಸೇನಾ, ಎನ್ ಸಿಪಿ ಮತ್ತು ಕಾಂಗ್ರೆಸ್ ಒಳಗೊಂಡ ಮಹಾ ವಿಕಾಸ ಅಘಾಡಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಕೇಂದ್ರ ಸರ್ಕಾರ ನಮ್ಮ ಪಾಲಿನ ಅನುದಾನ ನೀಡುತ್ತಿಲ್ಲ ಎಂದು ಠಾಕ್ರೆ ಆರೋಪಿಸಿದ್ದಾರೆ.

ಮುಂದಿನ ತಿಂಗಳು ರೈತರ ಸಾಲಮನ್ನಾ ಯೋಜನೆ ಜಾರಿಗೊಳಿಸಲಾಗುವುದು ಮತ್ತು ರಾಜ್ಯದಿಂದ ಯಾವುದೇ ಕೈಗಾರಿಕೆಗಳು ಹೊರಹೋಗದಂತೆ ನೋಡಿಕೊಳ್ಳಲಾಗುವುದು ಎಂದು ಮಹಾ ಸಿಎಂ ಭರವಸೆ ನೀಡಿದ್ದಾರೆ.

ಬುಲೆಟ್ ರೈಲು ಯೋಜನೆಗೆ ರೈತರು ಮತ್ತು ಬುಡಕಟ್ಟು ಜನಾಂಗ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಠಾಕ್ರೆ, ಬುಲೆಟ್ ರೈಲಿನಿಂದ ಯಾರಿಗೆ ಲಾಭ? ಅದರಿಂದ ರಾಜ್ಯದ ಉದ್ಯಮಕ್ಕೆ ಮತ್ತು ವ್ಯಾಪಾರಕ್ಕೆ ಹೇಗೆ ಸಹಾಯ ಆಗುತ್ತೆ? ಒಂದು ವೇಳೆ ಅದು ಪ್ರಯೋಜನಕಾರಿಯಾಗಿದ್ದರೆ ಆ ಬಗ್ಗೆ ನನಗೆ ಮನವರಿಕೆ ಮಾಡಿ. ನಂತರ ಬುಲೆಟ್ ರೈಲು ಬೇಕೋ ಅಥವಾ ಬೇಡೋ ಎಂಬುದನ್ನು ಜನ ನಿರ್ಧರಿಸುತ್ತಾರೆ ಎಂದರು.

ನಮ್ಮ ಸರ್ಕಾರ ಜನ ಸಾಮಾನ್ಯರ ಪರವಾಗಿದೆ. ಹೀಗಾಗಿ ನಾವು ಬುಲೆಟ್ ರೈಲು ಯೋಜನೆ ಕುರಿತು ಮರು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಮಹಾ ಸಿಎಂ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com