ದೆಹಲಿ ವಿಧಾನಸಭಾ ಚುನಾವಣೆಗೆ ವೇದಿಕೆ ಸಜ್ಜು: ಇವಿಎಂ ತಿರುಚಲು ಅಸಾಧ್ಯ-ಮುಖ್ಯ ಚುನಾವಣಾಧಿಕಾರಿ

70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಗೆ ವೇದಿಕೆ ಸಜ್ಜುಗೊಂಡಿದ್ದು, ರಾಷ್ಟ್ರ ರಾಜಧಾನಿಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಶಾಹೀನ್ ಬಾಗ್ ಮತ್ತಿತರ ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ
ದೆಹಲಿ ಮುಖ್ಯ ಚುನಾವಣಾಧಿಕಾರಿ
ದೆಹಲಿ ಮುಖ್ಯ ಚುನಾವಣಾಧಿಕಾರಿ

ನವದೆಹಲಿ: 70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಗೆ ವೇದಿಕೆ ಸಜ್ಜುಗೊಂಡಿದ್ದು, ರಾಷ್ಟ್ರ ರಾಜಧಾನಿಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಶಾಹೀನ್ ಬಾಗ್ ಮತ್ತಿತರ ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ

ದೆಹಲಿ ಚುನಾವಣಾ ಹೋರಾಟದಲ್ಲಿ ಸುಮಾರು 1.47 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಆಡಳಿತಾರೂಢ ಎಎಪಿ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ತ್ರಿಕೋನ ಹೋರಾಟವೇರ್ಪಟ್ಟಿದ್ದು, ಪೈಪೋಟಿಗೆ ಬಿದ್ದಂತೆ ಪ್ರಚಾರ ನಡೆಸಿವೆ.

ಚುನಾವಣಾ ಸಿದ್ದತೆ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ದೆಹಲಿ ಮುಖ್ಯ ಚುನಾವಣಾಧಿಕಾರಿ ರಣಬೀರ್ ಸಿಂಗ್,  ಎಲ್ಲಾ ವಿದ್ಯುನ್ಮಾನ ಮತಯಂತ್ರಗಳನ್ನು ಪರೀಕ್ಷಿಸಲಾಗಿದ್ದು, ಅವುಗಳನ್ನು ತಿರುಚಲು ಅಸಾಧ್ಯ ಎಂದರು. 

ಭದ್ರತಾ ಸಿಬ್ಬಂದಿಗಳು ಇವಿಎಂಗಳನ್ನು ಸ್ಟ್ರಾಂಗ್ ರೂಮ್ ನಲ್ಲಿರಿಸಿದ್ದಾರೆ. ಮತದಾನ ಸಾಮಾಗ್ರಿಗಳನ್ನು ಪಡೆದ ನಂತರ ಹೆಚ್ಚಿನ ಸಂಖ್ಯೆಯ ಮತಗಟ್ಟೆಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಶೀಘ್ರದಲ್ಲಿಯೇ ಎಲ್ಲಾ ಕಾರ್ಯಗಳು ನಡೆಯಲಿವೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದರಂತೆ 70 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  70 ಸ್ಥಳಗಳಲ್ಲಿಯೂ  ಮಹಿಳೆರಿಗಾಗಿ ಒಂದು ಪಿಂಕ್ ಮತಗಟ್ಟೆಗಳಿರುತ್ತವೆ ಎಂದು ತಿಳಿಸಿದರು.

ಸಿಎಎ ವಿರೋಧಿ ಪ್ರತಿಭಟನೆ ಹಿನ್ನೆಲೆಯಲ್ಲಿ  ಐದು ಮತಗಟ್ಟೆಗಳನ್ನೊಳಗೊಂಡ ಶಾಹೀನ್ ಬಾಗ್ ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದ್ದು, ಮತದಾರರಿಗೆ ತೊಂದರೆಯಾಗದ ರೀತಿಯಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

1 ಕೋಟಿ 47 ಲಕ್ಷದ 86 ಸಾವಿರದ 382 ಮಂದಿ ಮತದಾನ ಮಾಡಲು ಅರ್ಹರಾಗಿದ್ದಾರೆ. ಈ ಪೈಕಿ 2 ಲಕ್ಷದ 32 ಸಾವಿರದ 815 ಮಂದಿ 18ರಿಂದ 19 ವರ್ಷದೊಳಗಿನ ವಯಸ್ಸಿನವರಾಗಿದ್ದಾರೆ.70 ಸದಸ್ಯ ಬಲದ ವಿಧಾನಸಭಾ ಕಣದಲ್ಲಿ 672 ಅಭ್ಯರ್ಥಿಗಳಿದ್ದಾರೆ. ಅರಸೇನಾ ಪಡೆ ಹಾಗೂ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು. 

ಇದಕ್ಕೂ ಮುನ್ನ ಮಾತನಾಡಿದ ವಿಶೇಷ ಪೊಲೀಸ್ ಆಯುಕ್ತ ಪ್ರವೀಣ್ ರಂಜನ್, ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಶಸಾಸ್ತ್ರ ಪೊಲೀಸ್ ಪಡೆಯ 190 ತುಕಡಿಗಳನ್ನು ನಿಯೋಜಿಸಲಾಗಿದೆ. ವೆಬ್ ಕಾಸ್ಟಿಂಗ್ ಮೂಲಕ ಚಲನವಲನಗಳ ಮೇಲೆ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com