ನಿರ್ಭಯಾ ದೋಷಿಗಳ ಗಲ್ಲು ಶಿಕ್ಷೆ ಜಾರಿ ಮುಂದೂಡಿಕೆ? 'ಸುಪ್ರೀಂ' ನಿಂದ ಮಾರ್ಚ್ 5ಕ್ಕೆ ಕೇಂದ್ರ ಸರ್ಕಾರದ ಅರ್ಜಿ ವಿಚಾರಣೆ

ನಿರ್ಭಯಾ ದೋಷಿಗಳ ಗಲ್ಲು ಶಿಕ್ಷೆ ಜಾರಿ ಮುಂದೂಡಿಕೆಯಾಯಿತೇ..? ಇಂತಹುದೊಂದು ಪ್ರಶ್ನೆ ಇದೀಗ ಹುಟ್ಟಿಕೊಂಡಿದ್ದು, ಇದಕ್ಕೆ ಕಾರಣ ಸುಪ್ರೀಂ ಕೋರ್ಟ್ ನ ಇತ್ತೀಚಿನ ನಡೆ..

Published: 25th February 2020 02:03 PM  |   Last Updated: 25th February 2020 02:04 PM   |  A+A-


Nirbhaya convicts-SC

ಸಂಗ್ರಹ ಚಿತ್ರ

Posted By : Srinivasamurthy VN
Source : PTI

ನವದೆಹಲಿ: ನಿರ್ಭಯಾ ದೋಷಿಗಳ ಗಲ್ಲು ಶಿಕ್ಷೆ ಜಾರಿ ಮುಂದೂಡಿಕೆಯಾಯಿತೇ..? ಇಂತಹುದೊಂದು ಪ್ರಶ್ನೆ ಇದೀಗ ಹುಟ್ಟಿಕೊಂಡಿದ್ದು, ಇದಕ್ಕೆ ಕಾರಣ ಸುಪ್ರೀಂ ಕೋರ್ಟ್ ನ ಇತ್ತೀಚಿನ ನಡೆ..

ಹೌದು.. ಇದೇ ಮಾರ್ಚ್ 3ರಂದು ನಿರ್ಭಯಾ ಪ್ರಕರಣದ ಎಲ್ಲ ಅಪರಾಧಿಗಳನ್ನೂ ಗಲ್ಲಿಗೇರಿಸಬೇಕು ಎಂದು ದೆಹಲಿ ಕೋರ್ಟ್ ತೀರ್ಪು ನೀಡಿತ್ತು. ಆದರೆ ಇದೀಗ ನಿರ್ಭಯಾ ಅಪರಾಧಿಗಳಿಗೆ ಪ್ರತ್ಯೇಕ ಗಲ್ಲು ಶಿಕ್ಷೆ ಜಾರಿ ಮಾಡುವ ಕುರಿತ ಕೇಂದ್ರ ಸರ್ಕಾರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಸ್ವೀಕರಿಸಿದ್ದು, ಇದೇ ಮಾರ್ಚ್ 5ರಂದು ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿದೆ. ಹೀಗಾಗಿ ಕೇಂದ್ರ ಸರ್ಕಾರ ಸಲ್ಲಿಕೆ ಮಾಡಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುವವರೆಗೂ ನಿರ್ಭಯಾ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗುವುದಿಲ್ಲವೇ ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗಿದೆ.

ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ, ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ನವೀನ್ ಸಿನ್ಹಾ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಮಾರ್ಚ್ 5ರ ಮಧ್ಯಾಹ್ನ 3 ಗಂಟೆಗೆ ಕೇಂದ್ರ ಸರ್ಕಾರದ ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿದೆ.

ಇದೇ ವೇಳೆ ಯೂನಿಯನ್ ಆಫ್ ಇಂಡಿಯಾ ಪರ ವಕಾಲತ್ತು ವಹಿಸಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರು, ಪ್ರಕರಣದ ಅಪರಾಧಿಗಳಾದ ವಿನಯ್ ಶರ್ಮಾ, ಅಕ್ಷಯ್ ಠಾಕೂರ್, ಪವನ್ ಗುಪ್ತಾ, ಮತ್ತು ಮುಖೇಶ್ ಸಿಂಗ್ ಅವರಿಗೆ ಡೆತ್ ವಾರಂಟ್ ಮಾಡಿದ್ದ ದೆಹಲಿ ಹೈಕೋರ್ಟ್ ಆದೇಶದ ಪ್ರತಿಯನ್ನು ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠಕ್ಕೆ ಸಲ್ಲಿಕೆ ಮಾಡಿದರು. 

ಈ ಹಿಂದೆ ಇದೇ ಅರ್ಜಿಯನ್ನು ಕೇಂದ್ರ ಸರ್ಕಾರ ದೆಹಲಿಯ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಗೆ ಸಲ್ಲಿಕೆ ಮಾಡಿತ್ತು. ಆದರೆ ಈ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ  ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. 

ಏತನ್ಮಧ್ಯೆ ತಿಹಾರ್ ಜೈಲಿನಲ್ಲಿರುವ ದೋಷಿ ವಿನಯ್ ಶರ್ಮಾ ತಲೆ ಹೊಡೆದುಕೊಂಡು ಗಾಯ ಮಾಡಿಕೊಂಡಿದ್ದನು. ಈತನಿಗೆ ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ದೋಷಿ ಪರ ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಈ ಅರ್ಜಿಯನ್ನು ಕೂಡ ದೆಹಲಿ ಕೋರ್ಟ್ ವಜಾಗೊಳಿಸಿತ್ತು. ಅಲ್ಲದೆ ಒಂದೇ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ದೋಷಿಗಳನ್ನು ಜೊತೆಯಲ್ಲಿಯೇ ಗಲ್ಲುಶಿಕ್ಷೆಗೆ ಗುರಿಪಡಿಸಬೇಕು. ಅದರ ಬದಲು ಪ್ರತ್ಯೇಕವಾಗಿ ಗಲ್ಲುಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp