ದೆಹಲಿ ಹಿಂಸಾಚಾರ ಯೋಜಿತ ಪಿತೂರಿ, ನೈತಿಕ ಹೊಣೆಹೊತ್ತು ಅಮಿತ್ ಶಾ ರಾಜಿನಾಮೆ ನೀಡಲಿ ಎಂದ ಸೋನಿಯಾ ಗಾಂಧಿ

ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟುವುದರಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಗೃಹಸಚಿವ ಅಮಿತ್ ಶಾ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸೋತಿದ್ದಾರೆ ಹೀಗಾಗಿ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಒತ್ತಾಯಿಸಿದ್ದಾರೆ. 
ಸುದ್ದಿಗೋಷ್ಠಿಯಲ್ಲಿ ಸೋನಿಯಾ ಗಾಂಧಿ
ಸುದ್ದಿಗೋಷ್ಠಿಯಲ್ಲಿ ಸೋನಿಯಾ ಗಾಂಧಿ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟುವುದರಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಗೃಹಸಚಿವ ಅಮಿತ್ ಶಾ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸೋತಿದ್ದಾರೆ ಹೀಗಾಗಿ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಒತ್ತಾಯಿಸಿದ್ದಾರೆ. 

ದೆಹಲಿಯಲ್ಲಿ ಸಭೆ ನಡೆಸಿದ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ, ರಾಷ್ಟ್ರದ ರಾಜಧಾನಿಯಲ್ಲಿ ನಡೆದ ಗಲಭೆ ತಡೆಯಲು ಕೇಂದ್ರ ಹಾಗೂ ಕೇಜ್ರಿವಾಲ್​ ನೇತೃತ್ವದ ರಾಜ್ಯ ಸರ್ಕಾರ ವಿಫಲವಾಗಿವೆ. ಇದು ಅವರ ನಿರ್ಲಕ್ಷಕ್ಕೆ ಕಾರಣವಾಗಿದೆ ಎಂದು ಆರೋಪಿಸಿತು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ದೆಹಲಿ ಹಿಂಸಾಚಾರದ ಹೊಣೆಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ದೆಹಲಿ ಹಿಂಸಾಚಾರವನ್ನು ಯೋಜಿತ ಪಿತೂರಿ ಎಂದು ಕರೆದಿರುವ ಸೋನಿಯಾ ಗಾಂಧಿ, ಕಳೆದ 72 ಗಂಟೆಗಳಲ್ಲಿ ದೆಹಲಿ ಪೊಲೀಸರು ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಗಲಭೆಯಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದ ಸೋನಿಯಾ ಗಾಂಧಿ, ಇಷ್ಟೆಲ್ಲಾ ನಡೆಯುತ್ತಿದ್ದರೂ ಕೇಂದ್ರ ಗೃಹ ಸಚಿವರು ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಬೇಕು. ಗ್ರಾಮಗಳಲ್ಲಿ ಶಾಂತಿ ಸಮಿತಿಯನ್ನು ರಚನೆ ಮಾಡುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಕಾಂಗ್ರೆಸ್​ ಕಾರ್ಯಕರ್ತರು ಕೂಡಲೇ ಗಲಭೆ ಪೀಡಿತ ಪ್ರದೇಶಗಳಿಗೆ ತೆರಳಿ ನಾಗರಿಕರ ರಕ್ಷಣೆಗೆ ಕೈ ಜೋಡಿಸಬೇಕು ಎಂದು ಸೋನಿಯಾ ಮನಿವಿ ಮಾಡಿದರು.

ಈ ಗಲಭೆಗೆ ಕೇಂದ್ರ ಸರ್ಕಾರದ ನಿಷ್ಕ್ರಿಯತೆಯೇ ಕಾರಣ ಎಂದು ಟೀಕಿಸಿದ ಸೋನಿಯಾ ಮೊದಲು ಕೇಂದ್ರ ಸರ್ಕಾರ ಈ ಹಿಂಸಾಚಾರವನ್ನು ಅರಿತುಕೊಳ್ಳಬೇಕು ಮತ್ತು ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸೋನಿಯಾ ಒತ್ತಾಯಿಸಿದ್ದಾರೆ.

ಭಾನುವಾರದಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಈ ವರೆಗೂ ಕನಿಷ್ಠ 22 ಮಂದಿ ಬಲಿಯಾಗಿದ್ದು, 190ಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ ನೂರಾರು ಕೋಟಿ ರೂ ಮೌಲ್ಯದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿದ್ದು, ವಾಹನಗಳು, ಮನೆ, ಅಂಗಡಿಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ. 

ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಹಿರಿಯ ನಾಯಕರಾದ ಎ.ಕೆ.ಆಂಟನಿ, ಗುಲಾಮ್ ನಬಿ ಆಜಾದ್, ಪ್ರಿಯಾಂಕಾ ಗಾಂಧಿ ವಾದ್ರಾ, ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ ಇತರರು ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com