ದೆಹಲಿ ಹಿಂಸಾಚಾರ: ಸಾವಿನ ಸಂಖ್ಯೆ 34ಕ್ಕೆ ಏರಿಕೆ, 200ಕ್ಕೂ ಅಧಿಕ ಮಂದಿಗೆ ಗಾಯ

ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿ ಬಣಗಳ ನಡುವಿನ ಹಿಂಸಾಚಾರದಲ್ಲಿ ಬಲಿಯಾದವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.
ಸಹಜ ಸ್ಥಿತಿಯತ್ತ ದೆಹಲಿ (ಎಎನ್ಐ ಚಿತ್ರ)
ಸಹಜ ಸ್ಥಿತಿಯತ್ತ ದೆಹಲಿ (ಎಎನ್ಐ ಚಿತ್ರ)

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿ ಬಣಗಳ ನಡುವಿನ ಹಿಂಸಾಚಾರದಲ್ಲಿ ಬಲಿಯಾದವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.

ಕಳೆದ ಭಾನುವಾರದಿಂದ ನಡೆಯುತ್ತಿದ್ದ ಹಿಂಸಾಚಾರದಲ್ಲಿ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದವರ ಪೈಕಿ ಇಬ್ಬರು ಗುರುವಾರ ಮೃತರಾಗಿದ್ದು, ಈ ಪೈಕಿ ದೆಹಲಿಯ ಲೋಕನಾಯಕ ಜಯ ಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ ಓರ್ವ ಗಾಯಾಳು ಮತೃಪಟ್ಟಿದ್ದಾರೆ. ಆ ಮೂಲಕ ದೆಹಲಿ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ ಇದೀಗ 34ಕ್ಕೇರಿಕೆಯಾಗಿದೆ. 

ಇನ್ನು ಕಳೆದ ಮೂರು ದಿನಗಳಿಂದ ವ್ಯಾಪಕ ಹಿಂಸಾಚಾರಕ್ಕೆ ವೇದಿಕೆಯಾಗಿದ್ದ ಈಶಾನ್ಯ ದೆಹಲಿಯಲ್ಲಿ ಬೆಳಗಿನ ಜಾವದಿಂದ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಆದರೂ ಗಲಭೆಯಲ್ಲಿ ಸಿಲುಕಿ ಗಾಯಗೊಂಡ ಸುಮಾರು 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ರಾತ್ರಿಯಿಂದಲೇ ಪೊಲೀಸರು ಹಾಗೂ ಅರೆಸೇನಾ ತುಕಡಿ ಗಲಭೆ ಪೀಡಿತ ಪ್ರದೇಶಗಳಲ್ಲಿ ಗಸ್ತು ತಿರುಗಿದ್ದು, ಅಲ್ಲಲ್ಲಿ ಭದ್ರತಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಲ್ಲಿನ ಸೀಲಾಂಪುರ, ಚಾಂದ್ ಬಾಗ್, ಭಜನ್‌‌ಪುರ, ಖಜೂರಿಖಾಸ್ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ.

ಗಲಭೆ ಪೀಡಿತ ಪ್ರದೇಶಗಳ ರಸ್ತೆಗಳನ್ನು ಪಾಲಿಕೆ ಸಿಬ್ಬಂದಿ ಗುರುವಾರ ಬೆಳಗಿನ ಜಾವ ಸ್ವಚ್ಛಗೊಳಿಸಿದ್ದಾರೆ. ಬೆಳಗಿನ ಜಾವ ಯಾವುದೇ ಅಂಗಡಿ ಮುಂಗಟ್ಟು ತೆರೆದಿರಲಿಲ್ಲ. ಜನರು ದಿನ ಬಳಕೆ ವಸ್ತುಗಳಿಗೆ ಪರದಾಡುವಂತಾಗಿದೆ. ಇದೀಗ ಅರೆಸೇನಾ ಪಡೆಗಳ ಮುಖ್ಯಸ್ಥರು ಹಾಗೂ ದೆಹಲಿ ಪೊಲೀಸ್ ವರಿಷ್ಛಾಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಿ ಅಂಗಡಿ ಮುಂಗಟ್ಟು ತೆರೆಯುವಂತೆ ಮನವಿ ಮಾಡುತ್ತಿದ್ದಾರೆ.

'ನಾವೆಲ್ಲಾ ನಿಮ್ಮ ರಕ್ಷಣೆಗೆ ಇದ್ದೇವೆ. ದಿನನಿತ್ಯದ ವಸ್ತುಗಳ ಅಂಗಡಿ ತೆಗೆಯಬಹುದು. ಆದರೆ, ಯುವಕರು ಗುಂಪು ಸೇರಬೇಡಿ' ಎಂದು ದೆಹಲಿಯ ಜಂಟಿ ಪೊಲೀಸ್ ಆಯುಕ್ತ ಒ ಪಿ ಮಿಶ್ರಾ ಗುರುವಾರ ಸಿಬ್ಬಂದಿಯೊಂದಿಗೆ ಭದ್ರತೆಪಡೆಯೊಂದಿಗೆ ಗಸ್ತು ನಡೆಸಿ ಮೈಕಿನ ಮೂಲಕ ಸಾರಿದ್ದಾರೆ. ಪೊಲೀಸರು ಮನವಿ ಮಾಡುತ್ತಿದ್ದರೂ ಯಾರೊಬ್ಬರೂ ಹೊರಗೆ ಬರುತ್ತಿಲ್ಲ. ಬೆಳಗಿನ ಜಾವ ಅಲ್ಲಲ್ಲಿ ಜನರು ಮನೆಯ ಬಾಗಿಲುಗಳನ್ನು ತೆರೆದರೂ ಹೊರಗೆ ಕಾಲಿಡುತ್ತಿಲ್ಲ. ಅಂಗಡಿ ಮುಂಗಟ್ಟು ಮುಚ್ಚಿದ ಸ್ಥಿತಿಯಲ್ಲಿವೆ.

ದೆಹಲಿ ಗುರುವಾರ ಸಾಮಾನ್ಯ ಸ್ಥಿತಿಗೆ ಮರಳಿದೆ
ಡಿಸಿಪಿ ಎಸ್ಎನ್ ಶ್ರೀವಾಸ್ತವ ಪರಿಸ್ಥಿತಿ ಶಾಂತವಾಗಿದೆ. ರಾತ್ರಿಯಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮೊದಲು ಪ್ರಕರಣ ದಾಖಲಿಸುವ ಕೆಲಸ ನಡೆಯುತ್ತಿದೆ. ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗಲಭೆಯಲ್ಲಿ ಭಾಗಿಯಾದವರನ್ನು ಬಂಧಿಸಲಾಗುವುದು ಎಂದು ದೆಹಲಿಯ ಎಸ್ ಡಿಸಿಪಿ ಎಸ್.ಎನ್.ಶ್ರೀವಾಸ್ತವ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com