'ಸಂಸತ್ತು ಬಯಸಿದರೆ  ಪಿಒಕೆ ಭಾರತಕ್ಕೆ ಸೇರಬೇಕು, ನಮಗೆ ಆದೇಶ ಸಿಕ್ಕಿದರೆ ದಾಳಿ ಮಾಡಲು ಸಿದ್ಧ': ಸೇನಾ ಮುಖ್ಯಸ್ಥ ಜ.ನರವಾಣೆ

ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಮೇಲೆ ದಾಳಿ ಮಾಡಲು ಸರ್ಕಾರದಿಂದ ಆದೇಶ ಸಿಕ್ಕಿದರೆ ಸೇನೆ ತಯಾರಾಗಲಿದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜ.ಮನೋಜ್ ಮುಕುಂದ್ ನರವಾಣೆ ಹೇಳಿದ್ದಾರೆ.

Published: 11th January 2020 01:46 PM  |   Last Updated: 11th January 2020 01:58 PM   |  A+A-


Posted By : Sumana Upadhyaya
Source : PTI

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಮೇಲೆ ದಾಳಿ ಮಾಡಲು ಸರ್ಕಾರದಿಂದ ಆದೇಶ ಸಿಕ್ಕಿದರೆ ಸೇನೆ ತಯಾರಾಗಲಿದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜ.ಮನೋಜ್ ಮುಕುಂದ್ ನರವಾಣೆ ಹೇಳಿದ್ದಾರೆ.


ಅವರು ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಮ್ಮು-ಕಾಶ್ಮೀರ ಸೇರಿದಂತೆ ಪಾಕಿಸ್ತಾನ ಆಕ್ರಮಣ ಮಾಡಿಕೊಂಡಿರುವ ಪ್ರದೇಶಗಳು ಭಾರತಕ್ಕೆ ಸೇರಿದ್ದು ಎಂದು ಸಂಸತ್ತಿನಲ್ಲಿ ನಿರ್ಣಯವಾಗಿದೆ. ಹೀಗಾಗಿ ಸಂಸತ್ತು ಬಯಸಿದರೆ ಪಿಒಕೆ ಭಾರತಕ್ಕೆ ಸೇರಬೇಕು ಎಂದರು.


ಪಿಒಕೆ ಮೇಲೆ ದಾಳಿ ಮಾಡಲು ನಮಗೆ ಆದೇಶ ಸಿಕ್ಕಿದರೆ ಸೇನೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು. ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ಕೂಡ ಪಾಕ್ ಆಕ್ರಮಿತ ಕಾಶ್ಮೀರ ಮೇಲೆ ದಾಳಿ ನಡೆಸಲು ಭಾರತೀಯ ಸೇನೆ ಸನ್ನದ್ಧವಾಗಿದೆ, ಅದಕ್ಕೆ ಕೇಂದ್ರದಿಂದ ಒಪ್ಪಿಗೆ ಸಿಗಬೇಕಷ್ಟೆ ಎಂದು ಹೇಳಿದ್ದರು.


 ಸಿಡಿಎಸ್ ರಚನೆ: ರಕ್ಷಣಾ ಪಡೆಯ ಮುಖ್ಯಸ್ಥರ ಹುದ್ದೆ ರಚನೆಯು ಭಾರತೀಯ ಸೇನೆಯ ಮೂರೂ ಪಡೆಗಳ ಸಂಯೋಜನೆಗೆ ಬಹಳ ದೊಡ್ಡ ಹೆಜ್ಜೆಯಾಗಿದ್ದು ಇದರಿಂದ ಭಾರತೀಯ ಸೇನೆ ಯಶಸ್ಸಿನತ್ತ ಮುನ್ನಡೆಯಲಿದೆ ಎಂದು ಕೂಡ ಹೇಳಿದರು.


ರಕ್ಷಣಾ ಪಡೆ ಮುಖ್ಯಸ್ಥರ ಹುದ್ದೆ ರಚನೆ ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆಗಳನ್ನು ಸ್ಥಾಪಿಸಿರುವುದು ಭಾರತೀಯ ಸೇನೆಯೊಳಗೆ ಸಮನ್ವಯತೆ ವಿಚಾರದಲ್ಲಿ ಬಹಳ ದೊಡ್ಡ ಹೆಜ್ಜೆಯಾಗಿದೆ. ಸೇನೆಯೊಳಗೆ ಸಮನ್ವಯತೆ ಮತ್ತು ಸಂಯೋಜಿತ ಸಮರ ಪಡೆ ಅದಕ್ಕೊಂದು ಉದಾಹರಣೆಯಷ್ಟೆ. ಈ ಸಮನ್ವಯತೆ ಅಥವಾ ಸಂಯೋಜನೆ ಪ್ರಕ್ರಿಯೆಯಲ್ಲಿ ನಾವು ಪ್ರತಿಯೊಬ್ಬರನ್ನೂ ಕರೆದುಕೊಂಡು ಮುಂದೆ ಹೋಗುತ್ತೇವೆ. ಯಾರನ್ನೂ ಹಿಂದೆ ಬಿಡುವುದಿಲ್ಲ ಎಂದರು.


ರಕ್ಷಣಾ ಪಡೆಯ ಮೊದಲ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ಅವರು ಅಧಿಕಾರ ವಹಿಸಿಕೊಂಡ ನಂತರ ಈ ಬಗ್ಗೆ ಸೇನಾ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ.


ಭಾರತೀಯ ಸೇನೆ ಒಂದು ವೃತ್ತಿಪರವಾದ ಪಡೆಯಾಗಿದೆ. ಶಾಂತಿ ಸಮಯದಲ್ಲಿ, ಗಡಿ ನಿಯಂತ್ರಣ ರೇಖೆಯಲ್ಲಿ ಮತ್ತು ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆ ಅತ್ಯಂತ ವೃತ್ತಿಪರವಾಗಿ, ನೈತಿಕವಾಗಿ ನಡೆದುಕೊಳ್ಳುತ್ತದೆ ಎಂದರು.


ಸಂವಿಧಾನ ನಿಷ್ಠೆಯು ನಮಗೆ ಎಲ್ಲಾ ಸಮಯದಲ್ಲಿಯೂ ಮಾರ್ಗದರ್ಶನ ನೀಡಬೇಕು. ಸಂವಿಧಾನದಲ್ಲಿ ಸ್ಥಾಪಿತವಾಗಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳು ನಮಗೆ ಜೀವನದಲ್ಲಿ ಮಾರ್ಗದರ್ಶನವಾಗಬೇಕು ಎಂದರು. 


ಭವಿಷ್ಯದಲ್ಲಿ ಯುದ್ಧಗಳಿಗೆ ಸೇನೆಯನ್ನು ತಯಾರು ಮಾಡುವುದು ನಮ್ಮ ತರಬೇತಿಯ ಮುಖ್ಯ ಗುರಿಯಾಗಿದ್ದು, ಉತ್ತರದ ಗಡಿಭಾಗದಲ್ಲಿ ಸವಾಲುಗಳನ್ನು ಎದುರಿಸಲು ನಾವು ಸನ್ನದ್ಧವಾಗಿದ್ದೇವೆ ಎಂದು ಚೀನಾ ದೇಶ ಮಿಲಿಟರಿ ಮೂಲಭೂತ ಸೌಕರ್ಯಗಳನ್ನು ವಿಸ್ತರಿಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.


ಉತ್ತರದ ಗಡಿ ಭಾಗದುದ್ದಕ್ಕೂ ಯುದ್ಧದ ಸನ್ನದ್ಧತೆಯ ಸಮತೋಲನಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ,ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಕೂಡ ಮಾಡಿಕೊಳ್ಳುತ್ತಿದ್ದೇವೆ. ಭಾರತೀಯ ಸೇನೆಯೊಳಗೆ ಮತ್ತು ಮೂರೂ ಪಡೆಗಳ ಮಧ್ಯೆ ಸಂಯೋಜನೆ ತಂದು ಸಂಯೋಜಿತ ಸಮರ ಪಡೆಯನ್ನು ರಚಿಸಿ ಯಶಸ್ವಿಗೊಳಿಸುವುದು ನಮ್ಮ ಮುಂದಿನ ಉದ್ದೇಶವಾಗಿದೆ ಎಂದು ತಿಳಿಸಿದರು.

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp