ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ: ಜ.17ಕ್ಕೆ ಹಿರಿಯ ವಕೀಲರ ಸಭೆ ನಡೆಸಲು ಸುಪ್ರೀಂ ಕೋರ್ಟ್ ಆದೇಶ

ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶ ಕುರಿತ ಉಲ್ಲೇಖ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಸೋಮವಾರ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ವಕೀಲರು ಸಭೆ ನಡೆಸಿ ಚರ್ಚಿಸಿ ತೀರ್ಮಾನಕ್ಕೆ ಬರುವಂತೆ ಹೇಳಿದೆ. 
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ: ಜ.17ಕ್ಕೆ ಹಿರಿಯ ವಕೀಲರ ಸಭೆ ನಡೆಸಲು ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶ ಕುರಿತ ಉಲ್ಲೇಖ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಸೋಮವಾರ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನ  9 ನ್ಯಾಯಾಧೀಶರ ವಿಸ್ತ್ರೃತ ಪೀಠ, ಎಲ್ಲಾ ವಕೀಲರು ಸಭೆ ನಡೆಸಿ ಚರ್ಚಿಸಿ ತೀರ್ಮಾನಕ್ಕೆ ಬರುವಂತೆ ಹೇಳಿದೆ. ಹಿಂದಿನ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಎತ್ತಿರುವ 7 ಪ್ರಶ್ನೆಗಳನ್ನು ಪರಿಗಣಿಸಲಾಗುವುದು ಎಂದು ಕೂಡ ಹೇಳಿದೆ.


ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ ಸೆಕ್ರೆಟರಿ ಜನರಲ್ ಗೆ ನಾಲ್ವರು ವಕೀಲರ ನಡುವೆ ಸಮನ್ವಯತೆ ತರುವಂತೆ ಸೂಚಿಸಲಾಗಿದೆ. ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ತೋರಿಸಲಾಗುತ್ತದೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮೂರು ವಾರಗಳ ನಂತರ ವಿಚಾರಣೆ ನಡೆಸಲಾಗುವುದು ಎಂದು ಕೂಡ ಹೇಳಿದೆ.


ಇಂದು ಸುಪ್ರೀಂ ಕೋರ್ಟ್ ಗೆ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ 9 ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ವಿಚಾರಣೆಯನ್ನು ಕೈಗೆತ್ತಿಕೊಂಡು, ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸುವ ಕುರಿತ ವಿಚಾರಣೆಯನ್ನು ಮಾತ್ರ ನಡೆಸಲಿದೆ. ಆದರೆ ಈ ವಿವಾದ ಕುರಿತು ವಕೀಲರೆಲ್ಲರೂ ಸಭೆ ಸೇರಿ ಒಂದು ತೀರ್ಮಾನಕ್ಕೆ ಬಂದ ಮೇಲೆ ತೀರ್ಪು ನೀಡಲಾಗುವುದು ಎಂದು ಹೇಳಿತು. ಈ ಹಿನ್ನಲೆಯಲ್ಲಿ ಇದೇ 17ರಂದು ವಕೀಲರ ಸಭೆ ಕರೆಯಲು ಸುಪ್ರೀಂ ಕೋರ್ಟ್ ನ ಸೆಕ್ರೆಟರಿ ಜನರಲ್ ಗೆ ಕೋರ್ಟ್ ಇದೇ ಸಂದರ್ಭದಲ್ಲಿ ಆದೇಶ ನೀಡಿತು.


ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು 2018ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಮೇಲೆ ಅನೇಕ ವಾದ-ವಿವಾದ, ಕಲಹಗಳು ನಡೆದು ತೀರ್ಪನ್ನು ಮರು ಪರಿಶೀಲಿಸುವಂತೆ 50ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಕಳೆದ ನವೆಂಬರ್ 14ರಂದು ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ 3:2ರ ಬಹುಮತದ ತೀರ್ಪಿನಲ್ಲಿ ವಿಚಾರಣೆಯನ್ನು ಏಳು ನ್ಯಾಯಾಧೀಶರನ್ನೊಳಗೊಂಡ ವಿಸ್ತ್ರೃತ ಪೀಠಕ್ಕೆ ಉಲ್ಲೇಖಿಸಿತ್ತು.


ಇದೀಗ ಶಬರಿಮಲೆ ಪ್ರಕರಣ ಕುರಿತು ವಿಚಾರಣೆ ನಡೆಸುವ ನ್ಯಾಯಪೀಠದ ನೇತೃತ್ವವನ್ನು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ವಹಿಸಿದ್ದು ಪೀಠದಲ್ಲಿ ನ್ಯಾಯಮೂರ್ತಿಗಳಾದ ಆರ್ ಭಾನುಮತಿ, ಎಲ್ ನಾಗೇಶ್ವರ ರಾವ್, ಅಶೋಕ್ ಭೂಷಣ್, ಮೋಹನ್ ಎಂ ಶಾಂತನಗೌಡರ್, ಎಸ್ ಅಬ್ದುಲ್ ನಜೀರ್, ಆರ್ ಸುಭಾಷ್ ರೆಡ್ಡಿ,ಬಿ ಆರ್ ಗವೈ ಮತ್ತು ಸೂರ್ಯಕಾಂತ್ ಅವರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com