ದೆಹಲಿ ಚುನಾವಣೆ: ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ ಔಟ್

ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಹಾಗೂ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ...
ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ
ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಹಾಗೂ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ತೆಗೆದು ಹಾಕುವಂತೆ ಚುನಾವಣಾ ಆಯೋಗ ಬಿಜೆಪಿಗೆ ಆದೇಶಿಸಿದೆ.

ಚುನಾವಣಾ ಪ್ರಚಾರದ ವೇಳೆ ಸಿಎಎ ವಿರೋಧಿ ಪ್ರತಿಭಟನಾ ನಿರತರನ್ನು ಟೀಕಿಸಿದ್ದ ಅನುರಾಗ್ ಠಾಕೂರ್,  'ದೇಶದ್ರೋಹಿಗಳನ್ನು...' ಗುಂಡಿಕ್ಕಿ ಕೊಲ್ಲಬೇಕು(ಗೋಲಿ ಮಾರೋ) ಎಂದು ಹೇಳಿದ್ದರು.

'ಗುಂಡಿಕ್ಕಿ ಕೊಲ್ಲಿ' ಎಂದು ಕೂಗಿದ್ದು ನಾನಲ್ಲ, ಜನರು ಎಂದು ಸಚಿವ ಅನುರಾಗ್ ಠಾಕೂರ್ ಸಮಜಾಯಿಷಿ ನೀಡಿದ್ದಾರೆ. ಆದರೆ, ಠಾಕೂರ್ ಅವರ ಘೋಷಣೆಯ ಉದ್ದೇಶ ಅದೇ ಆಗಿತ್ತು ಎಂದು ಜಾಲತಾಣಿಗರು ಆರೋಪಿಸಿದ್ದರು. ಚುನಾವಣಾ ಆಯೋಗ ಈ ಕಾರ್ಯಕ್ರಮದ ವಿಡಿಯೋ ಪರಿಶೀಲಿಸಿ ಕ್ರಮ ತೆಗೆದುಕೊಂಡಿದೆ.

ಇನ್ನು ಪರ್ವೇಶ್ ವರ್ಮಾ ಅವರು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದೇ ಆದರೆ, ಒಂದು ಗಂಟೆಯಲ್ಲಿ ಶಹೀನ್ ಬಾಗ್'ನ್ನು ನೆಲಸಮ ಮಾಡಲಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ಚುನಾವಣಾ ಆಯೋಗ ವರ್ಮಾ ಅವರಿಗೆ ನೋಟಿಸ್ ಸಹ ಜಾರಿ ಮಾಡಿದೆ.

ಈ ಇಬ್ಬರು ನಾಯಕರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ತೆಗೆದು ಹಾಕುವಂತೆ ಚುನಾವಣಾ ಆಯೋಗ ಬಿಜೆಪಿಗೆ ನಿರ್ದೇಶನ ನೀಡಿದೆ. 

ಸ್ಟಾರ್ ಪ್ರಚಾರಕರ ವೆಚ್ಚವನ್ನು ಪಕ್ಷ ಭರಿಸುವುದರಿಂದ ಅವರಿಗೆ ಖರ್ಚು ವೆಚ್ಚದ ಮಿತಿ ಇರುವುದಿಲ್ಲ. ಈಗ ಠಾಕೂರ್ ಮತ್ತು ವರ್ಮಾ ಅವರ ಪ್ರಚಾರದ ವೆಚ್ಚಕ್ಕೆ ಮಿತಿ ಇರುತ್ತದೆ ಮತ್ತು ಅದನ್ನು ಅಭ್ಯರ್ಥಿಯೇ ಭರಿಸಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com