ತಮಿಳು ನಾಡು: ಥರ್ಮಲ್ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟ, 6 ಕಾರ್ಮಿಕರು ಸಾವು, 16 ಮಂದಿಗೆ ಗಾಯ

ಥರ್ಮಲ್ ವಿದ್ಯುತ್ ಘಟಕದಲ್ಲಿ ಬಾಯ್ಲರ್ ಸ್ಫೋಟವಾಗಿ 6 ಮಂದಿ ಕಾರ್ಮಿಕರು ಮೃತಪಟ್ಟು 16 ಮಂದಿ ತೀವ್ರ ಗಾಯಗೊಂಡ ಘಟನೆ ಬುಧವಾರ ಬೆಳಗಿನ ಜಾವ ತಮಿಳು ನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.
ಬಾಯ್ಲರ್ ಸ್ಫೋಟದ ಬಳಿಕ ಕಾರ್ಮಿಕರು ಸ್ಥಾವರದ ಹೊರಗೆ ಗಾಬರಿಯಿಂದ ನಿಂತಿರುವುದು
ಬಾಯ್ಲರ್ ಸ್ಫೋಟದ ಬಳಿಕ ಕಾರ್ಮಿಕರು ಸ್ಥಾವರದ ಹೊರಗೆ ಗಾಬರಿಯಿಂದ ನಿಂತಿರುವುದು

ಕಡಲೂರು (ತಮಿಳು ನಾಡು): ಥರ್ಮಲ್ ವಿದ್ಯುತ್ ಘಟಕದಲ್ಲಿ ಬಾಯ್ಲರ್ ಸ್ಫೋಟವಾಗಿ 6 ಮಂದಿ ಕಾರ್ಮಿಕರು ಮೃತಪಟ್ಟು 16 ಮಂದಿ ತೀವ್ರ ಗಾಯಗೊಂಡ ಘಟನೆ ಬುಧವಾರ ಬೆಳಗಿನ ಜಾವ ತಮಿಳು ನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.

ಚೆನ್ನೈಯಿಂದ 180 ಕಿಲೋ ಮೀಟರ್ ದೂರದ ಕಡಲೂರಿನಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ ನ ಎರಡನೇ ವಿದ್ಯುತ್ ಸ್ಥಾವರದ 5ನೇ ಘಟಕದಲ್ಲಿ ಈ ದುರುಂತ ಸಂಭವಿಸಿದೆ. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ 32 ಮೀಟರ್ ಎತ್ತರದ ಬಾಯ್ಲರ್ ನಿಂದ ಆರು ಮಂದಿ ಕಾರ್ಮಿಕರ ಶವಗಳನ್ನು ಹೊರತೆಗೆಯಲು ಸಾಧ್ಯವಾಗುತ್ತಿಲ್ಲ. ಈ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎಂದು ಕಂಪೆನಿ ವಕ್ತಾರರು ತಿಳಿಸಿದ್ದಾರೆ.

ಸ್ಫೋಟ ಸಂಭವಿಸಿದಾಗ ಬಾಯ್ಲರ್ ಕೆಲಸ ಮಾಡುತ್ತಿರಲಿಲ್ಲ. ಇಂದು ಬೆಳಗ್ಗೆ ಅದರ ಕಾರ್ಯಾರಂಭಕ್ಕೆ 12 ಮಂದಿ ಗುತ್ತಿಗೆ ಕಾರ್ಮಿಕರು ಮತ್ತು ಐವರು ಖಾಯಂ ಕಾರ್ಮಿಕರು ಪ್ರಯತ್ನ ಪಡುತ್ತಿದ್ದ ವೇಳೆ ಬಾಯ್ಲರ್ ಸ್ಫೋಟವಾಗಿದೆ. ಈ ಸಮಯದಲ್ಲಿ ಲಿಫ್ಟ್ ನಿಂತುಹೋಗಿದ್ದರಿಂದ ಮೆಟ್ಟಿಲುಗಳ ಮೂಲಕ ಓಡಿಹೋಗಿ ತಪ್ಪಿಸಿಕೊಳ್ಳಲು ಕಾರ್ಮಿಕರು ಪ್ರಯತ್ನಪಟ್ಟರು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಎರಡು ತಿಂಗಳಿನಿಂದೇಚೆಗೆ ಈ ವಿದ್ಯುತ್ ಸ್ಥಾವರದಲ್ಲಿ ನಡೆಯುತ್ತಿರುವ ಎರಡನೇ ಸ್ಫೋಟ ಇದಾಗಿದೆ. ಕಳೆದ ಮೇ ತಿಂಗಳಲ್ಲಿ ಬಾಯ್ಲರ್ ಸ್ಫೋಟವಾಗಿ 8 ಜನ ಕಾರ್ಮಿಕರು ಗಾಯಗೊಂಡಿದ್ದರು. ಕಾರ್ಮಿಕರಲ್ಲಿ ಖಾಯಂ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರು ಇದ್ದರು.

ಈ ವಿದ್ಯುತ್ ಸ್ಥಾವರದಲ್ಲಿ 3 ಸಾವಿರದ 940 ಮೆಗಾ ವ್ಯಾಟ್ ವಿದ್ಯುತ್ ಉತ್ಪತ್ತಿಯಾಗುತ್ತದೆ. ಸ್ಫೋಟ ಸಂಭವಿಸಿದ ಘಟಕದಲ್ಲಿ 1,470 ಮೆಗಾವ್ಯಾಟ್ ವಿದ್ಯುತ್ ಉತ್ಪತ್ತಿ ಮಾಡಲಾಗುತ್ತಿದೆ.

ಈ ಕಂಪೆನಿಯಲ್ಲಿ 27 ಸಾವಿರ ಕಾರ್ಮಿಕರಿದ್ದು ಅವರಲ್ಲಿ ಸುಮಾರು 15 ಸಾವಿರ ಮಂದಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com