ಇರೋದು ಒಂದೇ ಟೈಗರ್, ಅದು ಕಾಡಿನಲ್ಲಿದೆ: ಸಿಂಧಿಯಾಗೆ ದಿಗ್ವಿಜಯ್ ಸಿಂಗ್ ಟಾಂಗ್
'ಇರೋದು ಒಂದೇ ಟೈಗರ್, ಅದು ಕಾಡಿನಲ್ಲಿದೆ' ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು 'ಟೈಗರ್ ಅಭಿ ಝಿಂದಾ ಹೇ' ಎಂದಿದ್ದ ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಶುಕ್ರವಾರ ತಿರುಗೇಟು ನೀಡಿದ್ದಾರೆ.
Published: 03rd July 2020 03:04 PM | Last Updated: 03rd July 2020 03:04 PM | A+A A-

ದಿಗ್ವಿಜಯ್ ಸಿಂಗ್
ಭೋಪಾಲ್: 'ಇರೋದು ಒಂದೇ ಟೈಗರ್, ಅದು ಕಾಡಿನಲ್ಲಿದೆ' ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು 'ಟೈಗರ್ ಅಭಿ ಝಿಂದಾ ಹೇ' ಎಂದಿದ್ದ ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಶುಕ್ರವಾರ ತಿರುಗೇಟು ನೀಡಿದ್ದಾರೆ.
ಹುಲಿ ಬೇಟೆ ನಿಷೇಧಿಸದಿದ್ದಾಗ, ಜ್ಯೋತಿರಾದಿತ್ಯ ಸಿಂಧಿಯಾ ಅವರ ತಂದೆ ಮಾಧವರಾವ್ ಸಿಂಧಿಯಾ ಅವರು ಅವುಗಳನ್ನು ಹೇಗೆ ಬೇಟೆಯಾಡುತ್ತಿದ್ದರು ಎಂಬುದನ್ನು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ನೆನಪಿಸಿಕೊಂಡಿದ್ದಾರೆ.
"ಹುಲಿಯ ಗುಣ ನಿಮಗೆ ತಿಳಿದಿದೆ, ಕಾಡಿನಲ್ಲಿ ಕೇವಲ ಒಂದು ಹುಲಿ ಮಾತ್ರ ಜೀವಿಸುತ್ತದೆ" ಎಂದು ಸಿಂಧಿಯಾ ಅವರ 'ಟೈಗರ್ ಅಭಿ ಝಿಂದಾ ಹೇ' ಹೇಳಿಕೆಗೆ ದಿಗ್ವಿಜಯ್ ಸಿಂಗ್ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.
ನಿನ್ನೆಯಷ್ಟೇ ಮಧ್ಯಪ್ರದೇಶ ಸಂಪುಟ ವಿಸ್ತರಣೆಯಾಗಿದ್ದು, ಶಿವರಾಜ್ ಸಿಂಗ್ ಚೌಹಾಣ್ 28 ಸಚಿವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. 28 ಸಚಿವರ ಪೈಕಿ 14 ಮಂದಿ ಸಿಂಧಿಯಾ ಬೆಂಬಲಿಗರಾಗಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಿಂಧಿಯಾ, ದಿಗ್ವಿಜಯ್ ಸಿಂಗ್ ಅಥವಾ ಕಮಲನಾಥ್ ಅವರಿಂದ ನನಗೆ ಯಾವುದೇ ಪ್ರಮಾಣ ಪತ್ರ ಬೇಕಾಗಿಲ್ಲ, ಕಳೆದ 15 ತಿಂಗಳಲ್ಲಿ ಅವರು ರಾಜ್ಯವನ್ನು ಯಾವು ರೀತಿ ಕೊಳ್ಳೆ ಹೊಡೆದಿದ್ದಾರೆ ಎಂಬ ಬಗ್ಗೆ ಜನರಿಗೆ ತಿಳಿದಿದೆ. ಅವರಿಗೋಸ್ಕರ ಅವರಿಬ್ಬರು ಎಲ್ಲವನ್ನು ಮಾಡಿದ್ದಾರೆ, ಅವರು ನೀಡಿದ್ದ ಭರವಸೆಗಳನ್ನು ಜನ ಪರಿಶೀಲನೆ ಮಾಡಲಿದ್ದಾರೆ, ನಾನು ಬೇರೆ ಏನು ಮಾತನಾಡುವುದಿಲ್ಲ ಟೈಗರ್ ಅಭಿ ಜಿಂದಾ ಹೈ ಎಂದು ಮಾತ್ರ ಹೇಳುತ್ತೇನೆ ಎಂದಿದ್ದರು.